ADVERTISEMENT

10 ಸಾವಿರ ವನರಕ್ಷಕರಿಗೆ ಕೆಎಸ್‌ಡಿಎಲ್‌ ವತಿಯಿಂದ ಸುರಕ್ಷಾ ಕಿಟ್: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:03 IST
Last Updated 2 ಜೂನ್ 2025, 14:03 IST
   

ಬೆಂಗಳೂರು: ಅರಣ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ರಾಜ್ಯದ 10 ಸಾವಿರ ಅರಣ್ಯ ರಕ್ಷಕರು, ವೀಕ್ಷಕರು, ಕಾವಾಡಿಗಳು, ಮಾವುತರು ಮತ್ತು ಚಾಲಕರಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆಎಸ್ ಡಿಎಲ್) ವತಿಯಿಂದ ಗುಣಮಟ್ಟದ ಬ್ಯಾಗ್, ಜರ್ಕಿನ್, ಶೂ ಮತ್ತು ನೀರಿನ ಬಾಟಲಿ ಇರುವ ಕಿಟ್ ವಿತರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ (ಜೂನ್ 4) ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಅರಣ್ಯ ವೃತ್ತಗಳ 2,168 ಸಿಬ್ಬಂದಿಗೆ ಈ‌ ಕಿಟ್ ವಿತರಿಸಲಾಗುವುದು. ಅರಣ್ಯ ಸಚಿವ ಈಶ್ವರ ಖಂಡ್ರೆ, ಕೆಎಸ್ ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ, ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ ಭಾಗವಹಿಸುವರು. ಮುಂದಿನ ದಿನಗಳಲ್ಲಿ ರಾಜ್ಯದ ಉಳಿದೆಡೆಯ ಅರಣ್ಯಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ಕಿಟ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೆ.ಎಸ್‌.ಎಲ್‌.ಡಿ.ಎಲ್ ಸಂಸ್ಥೆಯ 2024-25ನೇ ಸಾಲಿನ ಎರಡು ಕೋಟಿ ರೂಪಾಯಿ ಸಿಎಸ್ಆರ್ ನಿಧಿಯನ್ನು ಈ ಕಿಟ್ ಖರೀದಿಗೆ ಬಳಸಲಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ಗಂಧದ ಎಣ್ಣೆ ಮುಖ್ಯವಾಗಿದೆ. ಈ ಸಂಪತ್ತನ್ನು ಕಾಪಾಡುವವರೇ ವನರಕ್ಷಕರು. ಅಂಥವರನ್ನು ಕುರಿತ ಕಳಕಳಿ ಈ ಹೆಜ್ಜೆಯಾಗಿದೆ ಎಂದಿದ್ದಾರೆ. ಕಿಟ್ ಸ್ವೀಕರಿಸುವ ಪ್ರತಿಯೊಬ್ಬರಿಂದ ಮೊದಲೇ ಅಳತೆ ತೆಗೆದುಕೊಂಡು, ಜರ್ಕಿನ್, ಶೂ ಖರೀದಿಸಲಾಗಿದೆ. ಇದರಲ್ಲಿ 5 ಸಾವಿರ ಮಂದಿ ಕಾಯಂ ಹಾಗೂ ಉಳಿದವರು ತಾತ್ಕಾಲಿಕ ಸಿಬ್ಬಂದಿ ಎಂದಿದ್ದಾರೆ.

ADVERTISEMENT

ಪ್ರತಿಕೂಲ ಸಂದರ್ಭಗಳಲ್ಲಿ ವನರಕ್ಷಕರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಕಿವಿಯಾಗಿ ಈ ಯೋಜನೆ ರೂಪಿಸಲು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾಗಿರುವ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ (ಎಸ್ ಪಿಪಿಎ) ಸಂಸ್ಥಾಪಕ ಧ್ರುವ ಪಾಟೀಲ ನೆರವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.