ADVERTISEMENT

ಐದು ದಿನಗಳಲ್ಲಿ ಬೆಂಗಳೂರು ಬಿಟ್ಟ ಲಕ್ಷ ಕಾರ್ಮಿಕರು: 3,400 ಬಸ್ಸುಗಳ ಕಾರ್ಯಾಚರಣೆ

ಉಚಿತ ಸಾರಿಗೆ ಸೌಲಭ್ಯ ಗುರುವಾರ ಅಂತ್ಯ

​ಪ್ರಜಾವಾಣಿ ವಾರ್ತೆ
Published 6 ಮೇ 2020, 20:03 IST
Last Updated 6 ಮೇ 2020, 20:03 IST
ವಲಸೆ ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳು ಸ್ವಂತ ಊರುಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು, ಬೆಂಗಳೂರಿನ ಮೆಜೆಸ್ಟಿಕ್‌ ಬಿ.ಎಂ.ಟಿ.ಸಿ ಬಸ್ ನಿಲ್ದಾಣಕ್ಕೆ ಬರುತ್ತಿರುವ ದೃಶ್ಯ. - ಪ್ರಜಾವಾಣಿ ಚಿತ್ರ. ಅನೂಪ್ ರಾಘ. ಟಿ.
ವಲಸೆ ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳು ಸ್ವಂತ ಊರುಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು, ಬೆಂಗಳೂರಿನ ಮೆಜೆಸ್ಟಿಕ್‌ ಬಿ.ಎಂ.ಟಿ.ಸಿ ಬಸ್ ನಿಲ್ದಾಣಕ್ಕೆ ಬರುತ್ತಿರುವ ದೃಶ್ಯ. - ಪ್ರಜಾವಾಣಿ ಚಿತ್ರ. ಅನೂಪ್ ರಾಘ. ಟಿ.   

ಬೆಂಗಳೂರು: ಊರು ಸೇರುವ ತವಕದಿಂದ ಸಾವಿರಾರು ವಲಸೆ ಕಾರ್ಮಿಕರು ಗಂಟೆಮೂಟೆ ಕಟ್ಟಿಕೊಂಡು ಬುಧವಾರ ಕೂಡಾ ನಸುಕಿನಲ್ಲೇ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು. ಹೀಗಾಗಿ, ಬೆಳಿಗ್ಗೆ 9 ಗಂಟೆಗೆ ಆರಂಭಿಸಬೇಕಿದ್ದ ಉಚಿತ ಬಸ್‌ ಕಾರ್ಯಾಚರಣೆಯನ್ನು ಸಾರಿಗೆ ಇಲಾಖೆ ಒಂದು ಗಂಟೆ ಮೊದಲೇ ಆರಂಭಿಸಿತು.

ಉಚಿತ ಸಾರಿಗೆ ಸೌಲಭ್ಯವನ್ನು ಸರ್ಕಾರ ಮತ್ತೆ ಎರಡು ದಿನ ವಿಸ್ತರಿಸಿದ ಮಾಹಿತಿ ಸಿಕ್ಕಿದ ಕಾರ್ಮಿಕರು, ನಗರದ ವಿವಿಧ ಕಡೆಯಿಂದ ನಸುಕಿನಿಂದಲೇ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದ್ದರು. ಬಸ್‌ ಹೊರಡುವ ಪ್ಲಾಟ್‌ ಫಾರಂಗಳ ಬಗ್ಗೆ ಮಾಹಿತಿ ನೀಡಿದ್ದರಿಂದ ಹೆಚ್ಚಿನ ಗೊಂದಲಕ್ಕೆ ಅವಕಾಶ ಆಗಲಿಲ್ಲ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಒಟ್ಟು 265 ಬಸ್ಸುಗಳು ರಾಜ್ಯದ 63 ಸ್ಥಳಗಳಿಗೆ ಕಾರ್ಯಾಚರಣೆ ನಡೆಸಿವೆ. ಆ ಮೂಲಕ, ಬೆಂಗಳೂರು ಮತ್ತು ರಾಜ್ಯದ ವಿವಿಧ ವಿಭಾಗಗಳಿಂದ ಐದು ದಿನಗಳಲ್ಲಿ ಅಂದಾಜು 1 ಲಕ್ಷ ಕಾರ್ಮಿಕರನ್ನು 3,400ಕ್ಕೂ ಹೆಚ್ಚು ಬಸ್ಸುಗಳಲ್ಲಿ ಅವರವರ ಊರುಗಳಿಗೆ ಕಳುಹಿಸಲಾಗಿದೆ. ಉಚಿತ ಬಸ್ಸಿನ ವ್ಯವಸ್ಥೆ ಗುರುವಾರ (ಮೇ 7) ಕೊನೆಗೊಳ್ಳಲಿದೆ. ಬೆಳಿಗ್ಗೆ 9 ಗಂಟೆಯಿಂದ 6 ಗಂಟೆಯವರೆಗೆ ಬಸ್ಸುಗಳ ಕಾರ್ಯಚರಣೆ ನಡೆಯಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.‌

ADVERTISEMENT

‘ಗುರುವಾರ ಕೊನೆಯದಾಗಿ ಕಾರ್ಮಿಕರನ್ನು ಉಚಿತವಾಗಿ ಕಳುಹಿಸುವ ಕೆಲಸ ಮಾಡುತ್ತೇವೆ. ಬಸ್‌ ನಿಲ್ದಾಣದಲ್ಲಿ ಸಾಕಷ್ಟು ಪ್ರಯಾಣಿಕರಿಗೆ ಅನೇಕ ಸಂಘ-ಸಂಸ್ಥೆಗಳು ಬ್ರೆಡ್ ಹಾಗೂ ಆಹಾರ ಕೊಟ್ಟಿದ್ದಾರೆ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

‘4 ದಿನಗಳಲ್ಲಿ ಖಾತೆಗೆ ವೇತನ’
‘ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳ ಸಿಬ್ಬಂದಿಗೆ ಏಪ್ರಿಲ್ ತಿಂಗಳ ವೇತನ ಬಟವಾಡೆಗೆ ಅಗತ್ಯವಾದ ₹326 ಕೋಟಿ ಹಣವನ್ನು ಸರ್ಕಾರದಿಂದ ನೇರವಾಗಿ ಪಡೆದು 3-4 ದಿನಗಳಲ್ಲಿ ನೌಕರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು’ ಎಂದು ಲಕ್ಷ್ಮಣ ಸವದಿ ತಿಳಿಸಿದರು. ‘ಮುಖ್ಯಮಂತ್ರಿ ಬಳಿ ಈ ಬಗ್ಗೆ ಮಾತನಾಡಿದ್ದೇನೆ. ಸಾರಿಗೆ ಇಲಾಖೆ ಸಿಬ್ಬಂದಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ’ ಎಂದರು.

ಕೊರೊನಾ ಯೋಧರಿಗೆ ಗೌರವ
ಕೊರೊನಾ ಸೋಂಕಿನ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಕೊರೊನಾ ಸೇನಾನಿಗಳಾದ ಸಾರಿಗೆ ನಿಗಮಗಳ ಚಾಲಕ, ನಿರ್ವಾಹಕ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗೆ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಬುಧವಾರ ಪುಷ್ಪವೃಷ್ಠಿ ಮೂಲಕ ಗೌರವಿಸಲಾಯಿತು.

ಸಚಿವ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಹೂಮಳೆಗೆರೆಯಲಾಯಿತು. ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ, ನಿರ್ದೇಶಕಿ ಕವಿತಾ ಎಸ್‌. ಮನ್ನಿಕೇರಿ (ಸಿಬ್ಬಂದಿ ಮತ್ತು ಪರಿಸರ) ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.