ADVERTISEMENT

ಉಚಿತ ಸೇವೆಯಲ್ಲಿ ಸಂತಸದ ಪಯಣ: ತಮ್ಮೂರಿನತ್ತ ಕಾರ್ಮಿಕರು

ಸಮಸ್ಯೆ ಮರುಕಳಿಸದಂತೆ ನೋಡಿಕೊಂಡ ಕೆಎಸ್‌ಆರ್‌ಟಿಸಿ * ಉಚಿತ ಬಸ್ ಪ್ರಯಾಣ ಸೌಲಭ್ಯ ಗುರುವಾರದವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 4 ಮೇ 2020, 20:40 IST
Last Updated 4 ಮೇ 2020, 20:40 IST
ವಲಸೆ ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳು ಸ್ವಂತ ಊರುಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು, ನೂರಾರು ಸಂಖ್ಯೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್‌ ಬಿ.ಎಂ.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದರು. - ಪ್ರಜಾವಾಣಿ ಚಿತ್ರ. ಅನೂಪ್ ರಾಘ. ಟಿ.
ವಲಸೆ ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳು ಸ್ವಂತ ಊರುಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು, ನೂರಾರು ಸಂಖ್ಯೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್‌ ಬಿ.ಎಂ.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದರು. - ಪ್ರಜಾವಾಣಿ ಚಿತ್ರ. ಅನೂಪ್ ರಾಘ. ಟಿ.   

ಬೆಂಗಳೂರು: ನಗರದ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಸೋಮವಾರವೂ ನೂರಾರು ಕಾರ್ಮಿಕರು ಜಮಾಯಿಸಿದ್ದರು. ಸರ್ಕಾರ ಉಚಿತ ಬಸ್‌ ಸೇವೆ ಒದಗಿಸಿದ್ದರಿಂದ ತವರಿಗೆ ಮರಳುವ ಉತ್ಸಾಹ ಅವರ ಮುಖದಲ್ಲಿ ಮನೆ ಮಾಡಿತ್ತು. ನಗರದಿಂದ 24 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕುಟುಂಬದೊಂದಿಗೆ ಊರಿಗೆ ಮರಳಿದರು.

ಕೆಲಸ ಕೊಟ್ಟ ಬೆಂಗಳೂರಿನ ಬಗ್ಗೆ ಅವರಲ್ಲಿ ಗೌರವ ಇತ್ತಾದರೂ, ಕೊರೊನಾ ಸೋಂಕಿನ ಕಾರಣದಿಂದ ಪಟ್ಟಿರುವ ಸಂಕಷ್ಟ ಅವರನ್ನು ಹೈರಾಣು ಮಾಡಿತ್ತು. ತವರೂರಿಗೆ ಹೋಗಿ ತಲುಪಿದರೆ ಸಾಕು ಎಂಬ ಭಾವನೆ ಹಲವರಲ್ಲಿತ್ತು.

‘ಲಾಕ್‌ಡೌನ್ ಅಂತೇನೋ ಚಾಲೂ ಆದಾಗಿಂದ ನಮ್ಮನ್ನ ನೋಡಿದ್ರ ಸಾಕು ಕಳ್ರನ್ನ ನೋಡ್ದಂಗ ಮಾಡ್ತಾರ. ಯಾರೂ ಹತ್ರ ಸೇರಸಾವಲ್ರು.. ಇಲ್ಲಿಗಿಂತ ಕೂಲಿ ಕಡಿಮಿ ಆದ್ರೂ ನಮ್ಮೂರಾಗ ಹೊಲ–ಮನಿ ಕೆಲಸ ಮಾಡ್ಕೊಂತ ಇರ್ತೀನಿ’ ಎಂದು ರಾಯಚೂರಿನ ಸಂಗಮೇಶಪ್ಪ ಬಸ್‌ ಏರಿ ಹೊರಟರು.

ADVERTISEMENT

ಕಾರ್ಮಿಕರಿಗೆ ಪ್ರಯಾಣದ ವ್ಯವಸ್ಥೆ ಮಾಡಿದ ಮೊದಲ ದಿನ ಉಂಟಾದ ಸಮಸ್ಯೆಗಳು ಮರುಕಳಿಸದಂತೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.

ಆಹಾರ ವ್ಯವಸ್ಥೆ:ನಗರದ ನಾನಾ ಭಾಗಗಳಿಂದ ಕಾಲ್ನಡಿಗೆಯಲ್ಲೇ ಬಂದು ಬಸ್ ನಿಲ್ದಾಣ ಸೇರುತ್ತಿದ್ದ ಪ್ರಯಾಣಿಕರಿಗೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಮೂಲಕ ಆಹಾರ ವ್ಯವಸ್ಥೆ ಮಾಡಲಾಗಿತ್ತು. ಉಚಿತವಾಗಿ ಆಹಾರ ವಿತರಿಸಲಾಯಿತು.

ಮೂರು ದಿನಗಳಲ್ಲಿ 60 ಸಾವಿರ ಜನರ ಪ್ರಯಾಣ
ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಸರ್ಕಾರದ ವತಿಯಿಂದ 60 ಸಾವಿರ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ರಾಜ್ಯದಲ್ಲಿ ಶನಿವಾರ 192 ಬಸ್‌ಗಳ ಮೂಲಕ 5,760 ಕಾರ್ಮಿಕರನ್ನು, ಭಾನುವಾರ 863 ಬಸ್‌ಗಳ ಮೂಲಕ 25,890 ಹಾಗೂ ಸೋಮವಾರ 941 ಬಸ್‌ಗಳಲ್ಲಿ 28,230 ಕಾರ್ಮಿಕರನ್ನು ತವರಿಗೆ ಕಳುಹಿಸಲಾಗಿದೆ ಎಂದು ನಿಗಮ ಹೇಳಿದೆ.

ಉಚಿತ ಬಸ್: ಎರಡು ದಿನ ವಿಸ್ತರಣೆ
ಮಂಗಳವಾರದವರೆಗೆ ಮಾತ್ರ ಇದ್ದ ಉಚಿತ ಬಸ್‌ ಸೇವೆಯನ್ನು ಸರ್ಕಾರವು ಗುರುವಾರದವರೆಗೆ ವಿಸ್ತರಿಸಿದೆ.

‘ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಉಚಿತ ಬಸ್‌ ಪ್ರಯಾಣ ಸೌಲಭ್ಯವನ್ನು ಎರಡು ದಿನ ವಿಸ್ತರಿಸಲಾಗಿದೆ. ಕಾರ್ಮಿಕರು ಅಥವಾ ಇತರೆ ಜನ ನಿಲ್ದಾಣಗಳಲ್ಲಿ ಜಮಾವಣೆಯಾಗದೆ, ನೆಮ್ಮದಿಯಿಂದ ಪ್ರಯಾಣಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಕಾರ್ಮಿಕರಿಗಾಗಿ‌ ಮಂಗಳವಾರ ಬೆಳಿಗೆ 9ರಿಂದ ಸಂಜೆಯ 6ರವರೆಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಇರುತ್ತದೆ ಎಂದು ನಿಗಮ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.