ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರ ಬೇಡಿಕೆ ಈಡೇರಿಸದೇ ಇರುವುದನ್ನು ಖಂಡಿಸಿ ಫೆ.19ರಂದು ಬೆಂಗಳೂರು ಚಲೊ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಜ.29ರಂದು ಬೆಂಗಳೂರು ಚಲೊ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕ್ರಿಯಾ ಸಮಿತಿಯ ನಾಯಕ ಎಚ್.ವಿ. ಅನಂತಸುಬ್ಬರಾವ್ ಅವರು ಜ.28ರಂದು ನಿಧನರಾಗಿದ್ದರಿಂದ ಬೆಂಗಳೂರು ಚಲೊ ಕಾರ್ಯಕ್ರಮ ಮುಂದೂಡಲಾಗಿತ್ತು.
‘2024ರ ಜನವರಿಯಿಂದ ವೇತನ ಪರಿಷ್ಕರಣೆ ನಡೆಸಬೇಕಿತ್ತು. ಹಲವು ಬಾರಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗದೇ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು’ ಎಂದು ಕ್ರಿಯಾ ಸಮಿತಿಯ ವಿಜಯ ಭಾಸ್ಕರ್ ಡಿ.ಎ., ಬಿ. ಜಯದೇವ ಅರಸು, ಎಚ್.ಡಿ. ರೇವಪ್ಪ, ವೆಂಕಟರಮಣಪ್ಪ, ವಿ. ಸೋಮಣ್ಣ, ಜಗದೀಶ ಎಚ್.ಆರ್., ರಾಜೇಂದ್ರಗೌಡ ಜಿ.ಕೆ. ಮಾಹಿತಿ ನೀಡಿದ್ದಾರೆ.
‘ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಆಗಸ್ಟ್‌ನಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಹೈಕೋರ್ಟ್‌ನ ಸೂಚನೆಯ ಮೇರೆಗೆ ಮುಷ್ಕರ ಕೈಬಿಡಲಾಗಿತ್ತು. ಆ ನಂತರ ಮಾತುಕತೆ ನಡೆಸಿದರೂ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲು ಸರ್ಕಾರ ಒಪ್ಪಿಲ್ಲ. 38 ತಿಂಗಳ ಹಿಂಬಾಕಿಯ ಬದಲು 14 ತಿಂಗಳ ಹಿಂಬಾಕಿ ನೀಡಲಷ್ಟೇ ಒಪ್ಪಿದೆ. ಹಿಂಬಾಕಿ ಪೂರ್ಣ ನೀಡಬೇಕು. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು ಎಂಬ ಒಪ್ಪಂದ ಮುರಿಯಬಾರದು. ಶೇ 25ರಷ್ಟು ವೇತನ ಹೆಚ್ಚಳ ಮಾಡಿ 2024ರಿಂದಲೇ ಜಾರಿ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ’ ಎಂದು
ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.