ಕುವೆಂಪು ಜಯಂತಿ ಪ್ರಕಾರ ಲಾಲ್‌ಬಾಗ್ ಪಶ್ಚಿಮ ದ್ವಾರದಲ್ಲಿರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಬೆಂಗಳೂರು: ‘ಕುವೆಂಪು ಕೇವಲ ಕವಿಯಾಗದೆ, ಕನ್ನಡದ ಪ್ರಜ್ಞೆಯಾಗಿದ್ದರು. ಇದರಿಂದಾಗಿ ಅವರು ಚಿರಸ್ಥಾಯಿಯಾಗಿದ್ದಾರೆ’ ಎಂದು ಸಾಹಿತಿ ರಾಜಶೇಖರ ಮಠಪತಿ (ರಾಗಂ) ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಹಾಗೂ ಕನ್ನಡ ಸಂಘರ್ಷ ಸಮಿತಿ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ತ.ನಂ.ಜ್ಞಾನೇಶ್ವರ ಅವರು ಸಂಪಾದಿಸಿದ ‘ಕುವೆಂಪು ಸಂದೇಶ’ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು.
‘ದೇಶ ಮತ್ತು ಭಾಷೆಗಳ ಅಸ್ಮಿತೆಯ ಸಂಕಷ್ಟದ ಕಾಲದಲ್ಲಿ ಜನಿಸಿದ ಕುವೆಂಪು, ತಮ್ಮ ಕವಿ ಕ್ಷಾತ್ರ ನುಡಿ ಹಾಗೂ ವೈಚಾರಿಕತೆಯ ಮೂಲಕ ನಾಡು ಕಟ್ಟುವ ಕೆಲಸ ಮಾಡಿದರು. ಅರವಿಂದ, ಟ್ಯಾಗೋರ್ ಅವರ ನಂತರ ಒಂದು ಭೂ ಖಂಡದ ಸಂಸ್ಕೃತಿಯನ್ನು ಕಟ್ಟಿಕೊಟ್ಟರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರುನಾಡು ಗೆಳೆಯರ ಜಗದೀಶ್ ಅವರು ವಿನ್ಯಾಸಗೊಳಿಸಿದ ಕನ್ನಡ ಅಂಕಿಗಳ ಕ್ಯಾಲೆಂಡರನ್ನು ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ ಅವರು ಬಿಡುಗಡೆ ಮಾಡಿದರು. ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.