
ಬೆಂಗಳೂರು: ‘ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪ್ರೊ.ಕ.ವೆಂ. ರಾಜಗೋಪಾಲ್ ಅವರು ನೈಜ ಕಲಾ ಯೋಗಿ ಆಗಿದ್ದು, ಕಲಾವಿದರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ದೊಡ್ಡ ಚೇತನ’ ಎಂದು ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಮತ್ತು ಪ್ರೊ.ಕ.ವೆಂ. ರಾಜಗೋಪಾಲ್ ಜನ್ಮ ಶತಮಾನೋತ್ಸವ ಸಮಿತಿ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಂಗಚಿಂತಕ ಪ್ರೊ.ಕ.ವೆಂ. ರಾಜಗೋಪಾಲ್ ಅವರ ಜನ್ಮಶತಮಾನೋತ್ಸವ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.
‘ಕನ್ನಡ ರಂಗಭೂಮಿಯಷ್ಟೇ ಅಲ್ಲ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೂ ರಾಜಗೋಪಾಲ್ ಅವರು ದೊಡ್ಡ ಸಂತರಾಗಿದ್ದರು. ಸಾಹಿತಿ, ಕವಿ, ನಾಟಕ ನಿರ್ದೇಶಕ ಹಾಗೂ ನಾಟಕಕಾರನಾಗಿ ಕೊಡುಗೆ ನೀಡಿದ್ದಾರೆ. ಪ್ರಗತಿಪರ ಚಿಂತನೆಯಲ್ಲಿ ಮುಂಚೂಣಿಯಲ್ಲಿದ್ದ ಅವರು, ಅನೇಕ ವಿದ್ಯಾರ್ಥಿಗಳನ್ನು ರಂಗ ಚಳವಳಿಯ ಜತೆಗೆ ಸಾಮಾಜಿಕ ಚಳವಳಿಗೂ ತಂದಿದ್ದರು’ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಕೆ. ಮರುಳಸಿದ್ದಪ್ಪ, ‘ಬೆಂಗಳೂರು ವಿಶ್ವವಿದ್ಯಾಲಯವು ರಂಗಭೂಮಿ, ಸಂಸ್ಕೃತಿ ಹಾಗೂ ನೃತ್ಯದಲ್ಲಿ ಏನಾದರೂ ಹೆಸರುಗಳಿಸಿದ್ದರೆ ಅದಕ್ಕೆ ಕ.ವೆಂ. ರಾಜಗೋಪಾಲ ಅವರ ಕೊಡುಗೆ ಹೆಚ್ಚಿದೆ. ಎಂಇಎಸ್ ಮತ್ತು ನ್ಯಾಷನಲ್ ಕಾಲೇಜಿನಲ್ಲಿ ರಂಗಭೂಮಿಯ ಗೀಳು ಹತ್ತಿಸಿ, ಕಾಲೇಜು ರಂಗಭೂಮಿ ಅತ್ಯಂತ ಸುಭದ್ರವಾಗಿ ರಾಜ್ಯದಲ್ಲಿ ನೆಲೆಯೂರಲು ಕಾರಣರಾದರು’ ಎಂದು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ‘ಕ.ವೆಂ. ರಾಜಗೋಪಾಲರ ಶತಮಾನೋತ್ಸವವನ್ನು ಮುಂದಿನ ಒಂದು ವರ್ಷ ಆಚರಿಸಲಾಗುತ್ತಿದ್ದು, ಮುಂದಿನ ತಿಂಗಳು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಕ.ವೆಂ. ರಾಜಗೋಪಾಲರ ಸಮಗ್ರ ನಾಟಕ ಸಾಹಿತ್ಯ ಮತ್ತು ಅನುವಾದ ಸಾಹಿತ್ಯ ಸಂಪುಟ ಅನಾವರಣ ಮಾಡಲಾಗುವುದು. ಮೈಸೂರು, ಗೌರಿಬಿದನೂರು, ಕೋಲಾರ, ಬಳ್ಳಾರಿ, ಮಂಗಳೂರು ಮತ್ತು ಕೊಡಗಿನಲ್ಲಿ ರಾಜಗೋಪಾಲ ಅವರ ಶತಮಾನೋತ್ಸವದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.