ADVERTISEMENT

ಕಾರ್ಮಿಕನ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 16:56 IST
Last Updated 16 ಅಕ್ಟೋಬರ್ 2020, 16:56 IST

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೇದಾರ್ ಸಹಾನಿ (45) ಎಂಬುವರನ್ನು ಹತ್ಯೆ ಮಾಡಿ, ಅವರ ಮೃತದೇಹವನ್ನು ಚೀಲದಲ್ಲಿ ತುಂಬಿ ಪೊದೆಯಲ್ಲಿ ಬಚ್ಚಿಟ್ಟಿದ್ದ ಆರೋಪಿ ರಾಹುಲ್‌ಕುಮಾರ್ ಅಲಿಯಾಸ್ ಚೋಟಾಲಾಲ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದ ಕೇದಾರ್ ಸಹಾನಿ, ನಗರದಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದರು. ತಮ್ಮ ಪತ್ನಿ ಜತೆಗಿನ ಸಲುಗೆ ಪ್ರಶ್ನಿಸಿದ್ದಕ್ಕಾಗಿ ಕೇದಾರ್‌ ಅವರನ್ನು ಆರೋಪಿ ರಾಹುಲ್ ಕೊಂದಿದ್ದನೆಂಬ ಸಂಗತಿ ತನಿಖೆಯಿಂದ ಗೊತ್ತಾಗಿತ್ತು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಕೇದಾರ್ ಮತ್ತು ರಾಹುಲ್, ಎರಡು ತಿಂಗಳಿಂದ ಆಂಧ್ರಹಳ್ಳಿಯ ಪ್ರಸನ್ನ ಲೇಔಟ್‌ನಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ನಿರ್ಮಾಣ ಹಂತದ ಕಟ್ಟಡದಸಮೀಪದಲ್ಲೇ ಶೆಡ್‌ನಲ್ಲಿ ನೆಲೆಸಿದ್ದರು. ಕೇದಾರ್‌ ಅವರ ಪತ್ನಿ ಜೊತೆ ರಾಹುಲ್ ಸಲುಗೆ ಇಟ್ಟುಕೊಂಡಿದ್ದ. ಇದು ಗೊತ್ತಾಗಿ ಕೇದಾರ್‌ ಎಚ್ಚರಿಕೆ ನೀಡಿದ್ದರು. ಅದೇ ವಿಚಾರಕ್ಕೆ ಗಲಾಟೆ ಆಗಿತ್ತು.’

ADVERTISEMENT

‘ಸೆ. 5ರ ರಾತ್ರಿ ನಿರ್ಮಾಣ ಹಂತದ ಕಟ್ಟಡದ ಕೊಠಡಿಯಲ್ಲಿ ಮಲಗಿದ್ದ ಕೇದಾರ್‌ನ ತಲೆ ಮೇಲೆ ಅಡುಗೆ ಸಿಲಿಂಡರ್ ಎತ್ತಿಹಾಕಿ ರಾಹುಲ್ ಹತ್ಯೆ ಮಾಡಿದ್ದ. ಮೃತದೇಹವನ್ನು ಚೀಲದಲ್ಲಿಟ್ಟು, ಸಮೀಪದ ಪೊದೆಯಲ್ಲಿ ಎಸೆದಿದ್ದ’ ಎಂದೂ ಹೇಳಿದರು.

‘ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಚೀಲದಲ್ಲಿ ಮೃತದೇಹ ಕಂಡಿತ್ತು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.