ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಆಯ ತಪ್ಪಿ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ಪ್ರಬೀನ್ ದೇಬ್ ಬರ್ಮಾನ್ (24) ಮೃತ ಕಾರ್ಮಿಕ.
ಮೃತನ ಸಹೋದರ ನಯಾಮ್ ದೇಬ್ ಬರ್ಮಾನ್ ದೂರಿನ ಮೇರೆಗೆ ಕೆಂಗೇರಿ ಠಾಣೆ ಪೊಲೀಸರು, ವಿ2 ವಜ್ರ ಎಲಿಗೆನ್ಸ್ ಅಪಾರ್ಟ್‌ಮೆಂಟ್‌ನ ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ ಮೇಸ್ತ್ರಿ ಬಾದಮ್ ಬರ್ಮಾನ್, ಸೆಂಟ್ರಿಂಗ್ ಮಾಲೀಕ ಮಂಜುನಾಥ್, ವಿ2 ವೋಲ್ಡಿಂಗ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಚೌಡರೆಡ್ಡಿ, ವೆಂಕಟರಮಣರೆಡ್ಡಿ ಹಾಗೂ ಇತರರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ಸಹೋದರ ನಯಾಮ್ ದೇಬ್ ಜತೆ ನಗರಕ್ಕೆ ಬಂದಿದ್ದ ಪ್ರಬೀನ್ ದೇಬ್ ಬರ್ಮಾನ್, ಉತ್ತರಹಳ್ಳಿ ರಸ್ತೆ ಅರೋಹಿ ಆಸ್ಪತ್ರೆಯ ಪಕ್ಕ ನಿರ್ಮಾಣ ಮಾಡುತ್ತಿದ್ದ ವಿ2 ವಜ್ರ ಎಲಿಗೆನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಸೇಂಟ್ರಿಂಗ್ ಕೆಲಸ ಮಾಡುತ್ತಿದ್ದ. ಹೀಗಾಗಿ ಪಕ್ಕದ ಶೆಡ್‌ನಲ್ಲಿ ಸಹೋದರರು ವಾಸವಾಗಿದ್ದರು. ಅಕ್ಟೋಬರ್ 13ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಟ್ಟಡದಲ್ಲಿ ಕೆಲಸ ಮಾಡುವಾಗ 6ನೇ ಮಹಡಿಯಿಂದ ಬಿದ್ದು ಅಸುನೀಗಿದ್ದಾರೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.