ADVERTISEMENT

ಕೆರೆಗಳ ಸಂರಕ್ಷಣೆಗೆ ಅಸಡ್ಡೆ; ರಾಜ್ಯ ಸರ್ಕಾರದ ವಿರುದ್ಧ ಎನ್‌ಜಿಟಿ ತೀವ್ರ ಆಕ್ರೋಶ

ಆದೇಶ ಜಾರಿಗೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 20:20 IST
Last Updated 2 ಡಿಸೆಂಬರ್ 2019, 20:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಬೆಂಗಳೂರಿನ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳ ಪುನಶ್ವೇತನಕ್ಕೆ ಸೂಚಿಸಲಾದ ಆದೇಶ ಪಾಲಿಸದಿರುವ ಕ್ರಮವು, ಜಲಮೂಲಗಳ ಬಗ್ಗೆ ರಾಜ್ಯ ಸರ್ಕಾರ ತೋರುತ್ತಿರುವ ಅಸಡ್ಡೆಯಲ್ಲದೆ ಬೇರೇನೂ ಅಲ್ಲ’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆಕ್ರೋಶ ವ್ಯಕ್ತಪಡಿಸಿದೆ.

ಬೆಳ್ಳಂದೂರು ಕೆರೆಯಲ್ಲಿ ನೊರೆ ಮತ್ತು ಹೊಗೆ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಆಧರಿಸಿ ದಾಖಲಿಸಿಕೊಳ್ಳಲಾದ ಸ್ವಯಂ ಪ್ರೇರಣೆಯ ಪ್ರಕರಣದ ವಿಚಾರಣೆಯನ್ನು ಸೋಮವಾರ ಮುಂದುವರಿಸಿದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಪೀಠ,‘ಕೆರೆಗಳ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಳೆದ ಡಿಸೆಂಬರ್‌ 6ರಂದು ನೀಡಲಾದ ಆದೇಶದ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲ’ ಎಂದುಆಕ್ರೋಶ ವ್ಯಕ್ತಪಡಿಸಿತು.

ನಿಗದಿಪಡಿಸಲಾದ ಕಾಲಮಿತಿಯಲ್ಲಿ ಕೆರೆಗಳ ಪುನಶ್ಚೇತನ ಕುರಿತ ಕಾಮಗಾರಿ ನಡೆಯದೇ ಇರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ ಪೀಠವು, ಡಿಸೆಂಬರ್ 11ಕ್ಕೆ ವಿಚಾರಣೆ ಮುಂದೂಡಿತು.

ADVERTISEMENT

ಕಳೆದ ತಿಂಗಳು ನಡೆದಿದ್ದ ವಿಚಾರಣೆಯ ವೇಳೆ ಪೀಠವು ಹಿರಿಯ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಹಸಿರು ಪೀಠವು, ‘ಆದೇಶ ಪಾಲಿಸಲಾಗಿಲ್ಲ ಎಂಬ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ನೇತೃತ್ವದ ಮೇಲ್ವಿಚಾರಣಾ ಸಮಿತಿಯ ವರದಿ ಆಧರಿಸಿ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬಾರದೇಕೆ’ ಎಂದು ಪ್ರಶ್ನಿಸಿತ್ತು.

ವಿಚಾರಣೆಗೆ ಅಧಿಕಾರಿಗಳ ಖುದ್ದು ಹಾಜರಾತಿಗೆ ಪೀಠ ಸೂಚಿಸಿದ್ದರಿಂದ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ರಮಣ ರೆಡ್ಡಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಅನಿಲ್‌ಕುಮಾರ್‌, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಅಧ್ಯಕ್ಷ ತುಷಾರ್‌
ಗಿರಿನಾಥ್‌ ಮತ್ತಿತರ ಹಿರಿಯ ಅಧಿಕಾರಿಗಳು ಹಸಿರು ಪೀಠದೆದುರು ಹಾಜರಾಗಿದ್ದರು.

ಕ್ಷಮೆ ಯಾಚನೆ: 2019ರ ಜೂನ್‌ 30ರೊಳಗೆ ಕೆರೆಗಳ ಪುನಶ್ಚೇತನ ಕಾರ್ಯವನ್ನು ಪೂರ್ಣಗೊಳಿಸುವಂತೆ ಆದೇಶ ನೀಡಲಾಗಿತ್ತು. ಈ ಸಂಬಂಧ ಗಂಭೀರ ಪ್ರಯತ್ನ ನಡೆಸಿದರೂ ಅನಿವಾರ್ಯ ಕಾರಣಗಳಿಂದ ಕ್ರಮ ಕೈಗೊಳ್ಳಲಾಗಿಲ್ಲ ಎಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ಮತ್ತು ವಕೀಲ ದರ್ಪಣ್‌ ಅವರು ಪೀಠದೆದುರು ಕ್ಷಮೆ ಯಾಚಿಸಿದರು.

ಕೆರೆಗಳ ಸಂರಕ್ಷಣೆಗಾಗಿ ನೀಡಲಾದ ಎನ್‌ಜಿಟಿಯ ನಿರ್ದೇಶನಗಳನ್ನು ಪಾಲಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸಿದೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದ ಸಮಿತಿ ಪರ ಹಾಜರಾದ ಹಿರಿಯ ವಕೀಲ ರಾಜ್‌ ಪಂಜ್ವಾನಿ ದೂರಿದರು.

ಕೆರೆಗಳಿಗೆ ಕೊಳಚೆ ನೀರು ಸೇರದಂತೆ ತಡೆಯಲು ಶುದ್ಧೀಕರಣ ಘಟಕ (ಎಸ್‌ಟಿಪಿ) ಅಳವಡಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದೂ ಅವರು ನ್ಯಾಯಮೂರ್ತಿ ಎಸ್.ಪಿ. ವಾಂಗ್ಡಿ ಹಾಗೂ ತಜ್ಞ ಸದಸ್ಯ ನಾಗಿನ್‌ ನಂದಾ ಅವರನ್ನೊಳಗೊಂಡ ಪೀಠದೆದುರು ವಿವರಿಸಿದರು.

‘ವಿಳಂಬಕ್ಕೆ ಸರ್ಕಾರವೇ ಹೊಣೆ. ಆದರೆ, ಕೆರೆಗಳ ಪುನಶ್ಚೇತನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವುದು ಅಸಾಧ್ಯ. ಎಸ್‌ಟಿಪಿ ಅಳವಡಿಕೆಗೆ ನಿಗದಿಪಡಿಸಿದ ಕಾಲಮಿತಿ ವಿಸ್ತರಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೋರಲಾಗಿತ್ತು’ ಎಂದು ಮಾಧವಿ ದಿವಾನ್ ವಾದಿಸಿದರು.

‘ಎಸ್‌ಟಿಪಿ ಸ್ಥಾಪನೆ ಕಾರ್ಯ ವಿಳಂಬವಾಗಿದ್ದೇಕೆ ಎಂಬುದಕ್ಕೆ ಎರಡು ವರ್ಷಗಳಿಂದ ಒಂದೇ ರೀತಿಯ ಕಾರಣ ನೀಡುತ್ತಿರುವುದು ಸರಿಯಲ್ಲ. ಅಲ್ಲದೆ, ಕಾಲಮಿತಿಯನ್ನು ವಿಸ್ತರಿಸುವ ಅಧಿಕಾರವನ್ನು ಯಾರಿಗೂ ನೀಡಲಾಗಿಲ್ಲ’ ಎಂದು ನ್ಯಾಯಪೀಠ
ಕಿಡಿಕಾರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.