ADVERTISEMENT

Lalbagh Flower Show | ಹೂ ರಾಶಿಯಲ್ಲಿ ಕೆಂಗಲ್‌ ನೆನಪಿನ ಚಿತ್ತಾರ

ಲಾಲ್‌ಬಾಗ್‌ನ ಗಾಜಿನ ಮನೆಗೆ ಸಾವಿರಾರು ಪುಷ್ಪ‍ಪ‍್ರಿಯರ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 0:20 IST
Last Updated 6 ಆಗಸ್ಟ್ 2023, 0:20 IST
ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಶಿವಪುರದ ಸತ್ಯಾಗ್ರಹದ ಸೌಧವನ್ನು ವೀಕ್ಷಿಸಿದ ಸಾರ್ವಜನಿಕರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಶಿವಪುರದ ಸತ್ಯಾಗ್ರಹದ ಸೌಧವನ್ನು ವೀಕ್ಷಿಸಿದ ಸಾರ್ವಜನಿಕರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಎತ್ತ ನೋಡಿದರತ್ತ ಬಣ್ಣ ಬಣ್ಣದ ವೈವಿಧ್ಯಮಯ ಪುಷ್ಪಗಳು, ಹೂವಿನ ರಾಶಿಯಲ್ಲಿ ಅರಳಿರುವ ವಿಧಾನಸೌಧ, ಶಿವಪುರದ ಸತ್ಯಾಗ್ರಹ ಸೌಧದ ಮಾದರಿಯನ್ನು ವೀಕ್ಷಿಸಲು ಲಾಲ್‌ಬಾಗ್‌ನಲ್ಲಿರುವ ಗಾಜಿನ ಮನೆಗೆ ಸಾವಿರಾರು ಪುಷ್ಪಪ್ರಿಯರು ಶನಿವಾರ ಆಗಮಿಸಿದ್ದರು.

ತೋಟಗಾರಿಕೆ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿಧಾನಸೌಧ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರ ಜೀವನದ ಐತಿಹಾಸಿಕ ಕ್ಷಣಗಳನ್ನು ಹೂ ರಾಶಿಯಲ್ಲಿ ಅನಾವರಣಗೊಳಿಸಲಾಗಿದೆ. 

ಬೆಳಿಗ್ಗೆಯಿಂದಲೇ ಸಾರ್ವಜನಿಕರು ತಂಡೋಪತಂಡವಾಗಿ ಲಾಲ್‌ಬಾಗ್‌ನತ್ತ ಬರುತ್ತಿದ್ದರು. ಸಂಜೆ ವೇಳೆ ಎತ್ತ ನೋಡಿದರೂ ಜನಜಾತ್ರೆ. ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜನಸಂದಣಿ ಹೆಚ್ಚಿತ್ತು. ಇದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.

ADVERTISEMENT

‘ಸ್ಥಳೀಯ ಹೂವುಗಳನ್ನು ಬಳಸಿಕೊಂಡು ಈ ಬಾರಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ದೇಶದಲ್ಲಿ ಇಷ್ಟೊಂದು ವೈವಿಧ್ಯಮಯ ಪುಷ್ಪಗಳನ್ನು ಬೆಳೆಯಲಾಗುತ್ತದೆ ಎನ್ನುವ ಮಾಹಿತಿಯನ್ನು ಮಕ್ಕಳಿಗೆ ತಿಳಿಸಲು ಇದು ಸಹಾಯಕವಾಗಲಿದೆ’ ಎಂದು ಕಾಮಾಕ್ಷಿಪಾಳ್ಯದ ಚೇತನಾ ಹೇಳಿದರು.

ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಹೂವಿನ ಲೋಕ ಸೃಷ್ಟಿಸಲಾಗಿದ್ದು, ಕೆಂಗಲ್‌ ಹನುಮಂತಯ್ಯ ಅವರ ಸಾಧನೆ ಕಣ್ತುಂಬಿಕೊಳ್ಳಬಹುದು ಎಂದು ರಾಮಮೂರ್ತಿನಗರದ ಶ್ವೇತಾ ತಿಳಿಸಿದರು.

ಲಾಲ್‌ಬಾಗ್ ಉದ್ಯಾನದ ವಿಸ್ತರಣೆ, ಕೋಲಾರ ಚಿನ್ನದ ಗಣಿ ರಾಷ್ಟ್ರೀಕರಣದ ಮಾದರಿ, ಸೇರಿ ಎಲ್ಲ ಕಲಾಕೃತಿಗಳ ಮುಂಭಾಗದಲ್ಲಿ ಹಿರಿಯರು–ಕಿರಿಯರು ಎನ್ನದೇ ಎಲ್ಲರೂ ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ವಿವಿಧ ತಳಿಯ ಸಾವಿರಾರು ಹೂಗಳಲ್ಲಿ ಅರಳಿದ ಕರ್ನಾಟಕ ಏಕೀಕರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಥಾಪನೆಯ ಕಲಾಕೃತಿಗಳನ್ನು ಶಾಲಾ ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.

ಜಾನೂರ್‌ ಕಲೆಯ ಮೂಲಕ ಕಪ್ಪು ಸುಂದರಿ ಪ್ರತಿಮೆಗೆ ಎಳೆ ತೆಂಗಿನ ಗರಿಗಳಿಂದ ತೊಡಿಸಿದ್ದ ಉಡುಗೆಯನ್ನು ಮಹಿಳೆಯರು ಕುತೂಹಲದಿಂದ ವೀಕ್ಷಿಸಿದರು. –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ರೆಂಗಶ್ರೀ
ಕೀರ್ತಿ
ಜೇಮ್ಸ್ ಥಾಮಸ್
ಯಶವಂತ

ವೈವಿಧ್ಯಮಯ ಪುಷ್ಪಗಳು

ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ಬಣ್ಣಗಳಿಂದ ಕೂಡಿದ 68ಕ್ಕೂ ಹೆಚ್ಚು ವಿವಿಧ ವಾರ್ಷಿಕ ಹೂಗಳಾದ ಸೇವಂತಿಗೆ ಗುಲಾಬಿ ಪಾಯಿನ್ಸಿಟಿಯಾ ಡ್ವಾರ್ಪ್‌ಇಕ್ಸೂರಾ ಪೆಂಟಾಸ್‌ಕಾರ್ನಿಯಾ ಬ್ರೋಮಿಲಿಯಾಯ್ಡ್ ಜೆರ್ಬೆರಾ ಸಿಲೋಷಿಯಾ ಮೇರಿಗೋಲ್ಡ್ ಡೇಲಿಯಾ ಶೀತವಲಯದಲ್ಲಿ ಬೆಳೆಯುವ ಸೈಕ್ಲೊಮನ್ ಪೂಷಿಯಾ ಆಜೇಲಿಯಾ ರೆಡ್‌ ಹಾಟ್‌ ಪೋಕರ್ ಹೂಗಳನ್ನು ಸಾರ್ವಜನಿಕರನ್ನು ಕಣ್ತುಂಬಿಕೊಂಡರು. 

ಸಾರ್ವಜನಿಕರ ಪ್ರತಿಕ್ರಿಯೆಗಳು

ಶಕ್ತಿಕೇಂದ್ರ ವಿಧಾನಸೌಧ ಇತಿಹಾಸ ಸಾರುತ್ತಿರುವ ಕೆಂಗಲ್‌ ಹನುಮಂತಯ್ಯ ಅವರು ಪ್ರತಿಮೆ ಸತ್ಯಾಗ್ರಹ ಸೌಧದ ಪರಿಕಲ್ಪನೆಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಿದ್ದಾರೆ. ಮೂರು ಪ್ರತಿಕೃತಿಗಳನ್ನು ಒಂದೇ ವೇದಿಕೆಯಲ್ಲಿ ನೋಡುತ್ತಿರುವುದು ಬಹಳ ಖುಷಿ ನೀಡಿದೆ.

-ಕೀರ್ತಿ ವಿದ್ಯಾರ್ಥಿನಿ ––

ಫಲಪುಷ್ಪ ಪ್ರದರ್ಶನವನ್ನು ಮೊದಲ ಬಾರಿಗೆ ವೀಕ್ಷಿಸುತ್ತಿದ್ದೇನೆ. ಕೆಂಗಲ್ ಹನುಮಂತಯ್ಯ ಅವರ ಜೀವನವನ್ನು ಪುಷ್ಪಗಳಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

-ಯಶವಂತ್ ಪೀಣ್ಯ ––

ಫಲಪುಷ್ಪ ಪ್ರದರ್ಶನವನ್ನು ನೋಡಲು ಕೇರಳದಿಂದ ಬಂದಿದ್ದೇನೆ. ಇಲ್ಲಿ ನಿರ್ಮಿಸಿರುವ ಪ್ರತಿಯೊಂದು ಕಲಾಕೃತಿಗಳ ಹಿಂದೆ ಕೆಲಸ ಮಾಡಿರುವ ಕಲಾವಿದರು ನಿರ್ವಹಣೆ ಮಾಡುವ ಸಿಬ್ಬಂದಿಯ ಕೆಲಸ ಶ್ಲಾಘನೀಯ.

-ಜೇಮ್ಸ್‌ ಥಾಮಸ್ ಕೇರಳ ––

ಫಲಪುಷ್ಪ ಪ್ರದರ್ಶನ ಮೊದಲ ಬಾರಿಗೆ ವೀಕ್ಷಣೆಗೆ ಬಂದಿದ್ದೇನೆ. ಕೆಂಗಲ್‌ ಹನುಮಂತಯ್ಯ ಅವರು ಮಂಡಿಸಿದ ರೈಲ್ವೆ ಬಜೆಟ್‌ ಅಂಗವಾಗಿ ರೈಲ್ವೆ ಪ್ರತಿಕೃತಿ ಸತ್ಯಾಗ್ರಹಸೌಧ ಮತ್ತು ವಿಧಾನಸೌಧ ಎಲ್ಲರ ಗಮನ ಸೆಳೆಯುತ್ತಿವೆ.

-ರೆಂಗಶ್ರೀ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.