ADVERTISEMENT

ಲಾಲ್‌ಬಾಗ್‌ನ 6 ಇಂಚು ಜಾಗವನ್ನೂ ಕಸಿಯಲು ಬಿಡಲ್ಲ: ಸಂಸದ ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 23:49 IST
Last Updated 12 ಅಕ್ಟೋಬರ್ 2025, 23:49 IST
ಲಾಲ್‌ಬಾಗ್‌ನಲ್ಲಿ ಸಾಗುವ ಸುರಂಗ ರಸ್ತೆಯ ನೀಲನಕ್ಷೆಯ ವಿವರಗಳನ್ನು ತೇಜಸ್ವಿ ಸೂರ್ಯ ಅವರಿಗೆ ಅಧಿಕಾರಿಗಳು ನೀಡಿದರು.
ಲಾಲ್‌ಬಾಗ್‌ನಲ್ಲಿ ಸಾಗುವ ಸುರಂಗ ರಸ್ತೆಯ ನೀಲನಕ್ಷೆಯ ವಿವರಗಳನ್ನು ತೇಜಸ್ವಿ ಸೂರ್ಯ ಅವರಿಗೆ ಅಧಿಕಾರಿಗಳು ನೀಡಿದರು.   

ಬೆಂಗಳೂರು: ‘ವಿನಾಶಕಾರಿ ಸುರಂಗ ಮಾರ್ಗಕ್ಕೆ ಲಾಲ್‌ಬಾಗ್‌ನಲ್ಲಿ ಆರು ಎಕರೆಯಲ್ಲ, ಆರು ಇಂಚು ಭೂಮಿಯನ್ನೂ ಕಸಿದುಕೊಳ್ಳಲು ಬಿಡುವುದಿಲ್ಲ’ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಸುರಂಗ ಮಾರ್ಗಕ್ಕೆ ಭೂಸ್ವಾಧೀನಕ್ಕಾಗಿ ಪ್ರಸ್ತಾಪಿಸಲಾದ 1.5 ಎಕರೆ ಜಾಗವನ್ನು ಲಾಲ್‌ಬಾಗ್‌ನಲ್ಲಿ ಭಾನುವಾರ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಈ ಯೋಜನೆಗೆ ಸುಮಾರು ಆರು ಎಕರೆಗಳಷ್ಟು ಪರಿಸರ-ಪಾರಂಪರಿಕ ಜಾಗವನ್ನು ಕಬಳಿಸಲು ಯೋಜಿಸಿದೆ. ಬೆಂಗಳೂರಿನ ಹಸಿರು ಶ್ವಾಸಕೋಶದಂತಿರುವ ಲಾಲ್‌ಬಾಗ್ ಪ್ರದೇಶವನ್ನು ಶಾಶ್ವತವಾಗಿ ನಿರ್ನಾಮ ಮಾಡುವ ಕೃತ್ಯ ಇದಾಗಿದೆ ಎಂದು ಆರೋಪಿಸಿದರು.

ADVERTISEMENT

ಇದಕ್ಕಿಂತಲೂ ಹೆಚ್ಚು ಆತಂಕಕಾರಿಯೆಂದರೆ, ಪ್ರಸ್ತಾವಿತ ಸುರಂಗವು 3 ಶತಕೋಟಿ ವರ್ಷಗಳಷ್ಟು ಹಳೆಯದಾದ ಪೆನಿನ್ಸುಲರ್ ಗ್ನೈಸ್ ಬಂಡೆಯ ಕೆಳಗೆ ನೇರವಾಗಿ ಹಾದುಹೋಗುತ್ತದೆ, ಇದು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾಗಿದ್ದು,ಈ ಪ್ರಾಚೀನ ರಚನೆಯ ಮೂಲಕ ಕೊರೆಯುವುದು ಅಪಾಯಕಾರಿಯಾದುದು ಎಂದು ಆತಂಕ ವ್ಯಕ್ತಪಡಿಸಿದರು.

ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಮತ್ತು ಕಾರ್ಯಸಾಧ್ಯತಾ ಅಧ್ಯಯನವು ಕಾಪಿ–ಪೇಸ್ಟ್‌ ಕೆಲಸದಂತೆ ಕಾಣುತ್ತಿದೆ. ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ ನಡೆಸಿಲ್ಲ. ಇದು ಕಳಪೆ, ಅವೈಜ್ಞಾನಿಕ ಎಂದು ಹೇಳಿದರು.

ಸುರಂಗ ಇರುವ ಸ್ಥಳದಲ್ಲಿ ಲಾಲ್‌ಬಾಗ್‌ನೊಳಗೆ ವಾಣಿಜ್ಯ ಸಂಕೀರ್ಣ ನಿರ್ಮಾಣದ ಬಗ್ಗೆ ಡಿಪಿಆರ್‌ನಲ್ಲಿ ಪ್ರಸ್ತಾಪಿಸಿದೆ. ಬೆಂಗಳೂರಿನ ಅತ್ಯಂತ ಹಳೆಯ ಸಸ್ಯೋದ್ಯಾನದೊಳಗೆ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು ಹುಚ್ಚುತನ ಎಂದು ಟೀಕಿಸಿದರು.

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದ ದುರಂತವನ್ನು ಕಂಡಿದ್ದೇವೆ. ಯಾವುದೇ ಜವಾಬ್ದಾರಿಯುತ ಸರ್ಕಾರವು ಸಮಗ್ರವಾಗಿ ಸುರಕ್ಷತಾ ಪರಿಶೀಲನೆ ನಡೆಸಬೇಕು. ಆದರೆ, ಈ ಸುರಂಗದ ಜೋಡಣೆ ಮತ್ತು ಭೂವೈಜ್ಞಾನಿಕ ದತ್ತಾಂಶವನ್ನು ತೋರಿಸಲು ಜಿಬಿಎ ಅಧಿಕಾರಿಗಳನ್ನು ಕೇಳಿದಾಗ ಅವರು ಪಲಾಯನ ಮಾಡಿದ್ದಾರೆ ಎಂದು ಆರೋಪಿಸಿದರು.

ಲಾಲ್‌ಬಾಗ್‌ನ ಭೂವಿಜ್ಞಾನ ಮತ್ತು ಭೂಕಂಪನ ಶಾಸ್ತ್ರದ ಮೇಲಿನ ಸಂಭಾವ್ಯ ಪರಿಣಾಮಗಳ ಕುರಿತು ಸ್ವತಂತ್ರ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸುವಂತೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.