ADVERTISEMENT

ಆರ್.ಆರ್. ನಗರದಲ್ಲಿ ಲ್ಯಾಂಬೋರ್ಗಿನಿ ವೇಗವಾಗಿ ಹೋಗಲು ಸಾಧ್ಯವೇ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 23:10 IST
Last Updated 24 ಜನವರಿ 2026, 23:10 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ರಾಜರಾಜೇಶ್ವರಿ ನಗರದಲ್ಲಿನ ಟ್ರಾಫಿಕ್‌ ಗಮನಿಸಿದರೆ ಈ ಪ್ರದೇಶದಲ್ಲಿ ಲ್ಯಾಂಬೋರ್ಗಿನಿಯಂತಹ ಕಾರನ್ನು ಹೇಗೆ ತಾನೇ ವೇಗವಾಗಿ ಚಲಾಯಿಸಲು ಸಾಧ್ಯ’ ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ಹೈಕೋರ್ಟ್, ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಲ್ಯಾಂಬೊರ್ಗಿನಿ ಕಾರು ಓಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ.

‘ನನ್ನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಸಿ.ವಿ.ರಾಮನ್‌ ನಗರದ ಬಿ.ಆರ್‌.ಚಿರಂತನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಪ್ರತಿವಾದಿ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದ್ದು ವಿಚಾರಣೆಯನ್ನು ಫೆಬ್ರುವರಿ 6ಕ್ಕೆ ಮುಂದೂಡಲಾಗಿದೆ.

ADVERTISEMENT

ಪ್ರಕರಣವೇನು?: ಬೆಂಗಳೂರಿನ ಲ್ಯಾಂಬೊರ್ಗಿನಿ ಷೋ ರೂಮ್‌ ವತಿಯಿಂದ ಮಡಿಕೇರಿಯಲ್ಲಿ 2025ರ ಡಿಸೆಂಬರ್‌ 14ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು 13 ಲ್ಯಾಂಬೊರ್ಗಿನಿ ಕಾರುಗಳು ಹೊರಟಿದ್ದವು. ಈ ಪೈಕಿ ಅರ್ಜಿದಾರರ ಕಾರು ಕೊನೆಯದಾಗಿತ್ತು.

‘ಅತಿವೇಗ ಮತ್ತು ಅಜಾಗರೂಕತೆಯಿಂದ ಲ್ಯಾಂಬೊರ್ಗಿನಿ ಕಾರನ್ನು ಚಾಲನೆ ಮಾಡಲಾಗಿದೆ’ ಎಂಬ ಆಕ್ಷೇಪದ ವಿಡಿಯೊವನ್ನು ‘ಸನಾತನ’ ಎಂಬ ‘ಎಕ್ಸ್‌’ ಖಾತೆಯಲ್ಲಿ ವೀಕ್ಷಿಸಿರುವುದಾಗಿ ಪಿಎಸ್‌ಐ ಆರ್‌. ರಾಮಸ್ವಾಮಿ ದೂರು ನೀಡಿದ್ದರು. ಇದರನ್ವಯ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ, ಭಾರತೀಯ ಮೋಟಾರು ವಾಹನಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.