ADVERTISEMENT

ಸಮಗ್ರ ಭೂಸ್ವಾಧೀನ ಕಾಯ್ದೆ ರೂಪಿಸಿ: ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 20:12 IST
Last Updated 23 ಆಗಸ್ಟ್ 2025, 20:12 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ರಾಜ್ಯದಲ್ಲಿ ಸಮಗ್ರವಾದ ಭೂಸ್ವಾಧೀನ ನೀತಿಯನ್ನು ಕಾಲಮಿತಿಯೊಳಗೆ ಜಾರಿಗೊಳಿಸಬೇಕು. ಅಲ್ಲಿಯವರೆಗೂ ಹೊಸದಾಗಿ ಭೂಸ್ವಾಧೀನಕ್ಕೆ ಅವಕಾಶ ನೀಡಬಾರದು’ ಎಂದು ಬುಧವಾರ ಇಲ್ಲಿ ಆಗ್ರಹಿಸಲಾಯಿತು.

ಕರ್ನಾಟಕ ಜನಮುಖಿ ಚಿಂತಕರು ಮತ್ತು ಸಾಂಸ್ಕೃತಿಕ ದನಿಗಳ ವೇದಿಕೆ ನಗರದಲ್ಲಿ ಹಮ್ಮಿಕೊಂಡಿದ್ದ ‘ಕರ್ನಾಟಕದ ಸಮತೋಲನ ಅಭಿವೃದ್ಧಿಗೆ ಸಮಗ್ರ ಭೂಸ್ವಾಧೀನ ನೀತಿ ನಿಲುವುಗಳು’ ಕುರಿತ ಚಿಂತನಾ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದ ಬಳಿಕ, ಮೂರು ಹಕ್ಕೊತ್ತಾಯ ಮಂಡಿಸಲಾಯಿತು.

ADVERTISEMENT

ದೇವನಹಳ್ಳಿ, ಆನೇಕಲ್‌, ನೆಲಮಂಗಲ, ಬಿಡದಿ ಸೇರಿದಂತೆ ಹಲವು ಕಡೆ ನಡೆದಿರುವ ಕೃಷಿ ಜಮೀನುಗಳ ಸ್ವಾಧೀನ ಮತ್ತು ನಂತರದ ಬೆಳವಣಿಗೆ ಕುರಿತು ಸಭೆಯಲ್ಲಿ  ಪ್ರಸ್ತಾಪಿಸಲಾಯಿತು.

‘ಬಿಡದಿ ಭಾಗದಲ್ಲಿ ಮತ್ತೆ 9,500 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳುವ ಚಟುವಟಿಕೆಗಳನ್ನು ಸರ್ಕಾರ ಆರಂಭಿಸುತ್ತಿದೆ. ಕೆಐಎಡಿಬಿ ಬಳಿಕ ಈಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ಇದಕ್ಕಾಗಿ ಬಳಸಿಕೊಳ್ಳುವ ಆತಂಕವಿದೆ’ ಎಂದು ಬಿಡದಿ ಭಾಗದ ರೈತರು ಆತಂಕ ವ್ಯಕ್ತಪಡಿಸಿದರು.

‘ಭೂಮಿ ಕಳೆದುಕೊಂಡವರ ಬದುಕು ನರಕವಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಕೃಷಿ, ಕೈಗಾರಿಕೆ ಹಾಗೂ ಭೂಸ್ವಾಧೀನ ನೀತಿಗಳನ್ನು ಪೂರಕವಾಗಿ ರೂಪಿಸಬೇಕು’ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸದ್ಯದಲ್ಲೇ ಭೇಟಿ ಮಾಡಿ ಭೂಸ್ವಾಧೀನ ನೀತಿಯ ರೂಪುರೇಷೆಗಳ ಕುರಿತು ಚರ್ಚಿಸಿ, ಹೊಸ ನೀತಿ ಜಾರಿಗೆ ಒತ್ತಡ ಹಾಕುವ ನಿರ್ಧಾರವನ್ನು ವೇದಿಕೆ ಸಂಚಾಲಕರಾದ ಪ್ರಕಾಶ್‌ ಕಮ್ಮರಡಿ ಪ್ರಕಟಿಸಿದರು.

‘ಕೃಷಿ, ಕೈಗಾರಿಕೆ ಮತ್ತು ನಗರೀಕರಣಕ್ಕೂ ಮಹತ್ವ ಕೊಡಬೇಕಿದೆ. ಆದರೆ, ಭೂ-ಸ್ವಾಧೀನ ಪ್ರಕ್ರಿಯೆ ಆರಂಭಿಸುವ ಮೊದಲು ಸರ್ಕಾರ ರೈತರೊಡನೆ ಸಮಾಲೋಚಿಸಿ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಎಲ್‌.ಕೆ. ಅತೀಕ್‌ ಸಲಹೆ ನೀಡಿದರು.

‘ಕೃಷಿಯಿಂದ ಜೀವನ ಕಟ್ಟಿಕೊಳ್ಳುವುದು ಕಷ್ಟಕರವಾಗುತ್ತಿದೆ ಎಂದು ಸ್ವತಃ ರೈತರೇ ತಮ್ಮ ಜಮೀನುಗಳನ್ನು ರಿಯಲ್ ಎಸ್ಟೇಟ್‌ನವರ ಕೈಗೆ ನೀಡುತ್ತಿದ್ದಾರೆ. ಇದು ನಿಲ್ಲಬೇಕು’ ಎಂದು ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.