ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಕ್ಷಣಾ ಮತ್ತು ವೈಮಾನಿಕ ಪಾರ್ಕ್ ನಿರ್ಮಾಣಕ್ಕೆ 449 ಎಕರೆಯಷ್ಟು ಭೂಮಿಯನ್ನು ನೀಡಲು ಸಿದ್ಧ ಎಂದು ತಿಳಿಸಿದ್ದಾರೆ.
‘ಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿ’ಯು ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರತಿನಿಧಿಗಳು, ಆನಂತರ ಮುಖ್ಯಮಂತ್ರಿಯ ನಿವಾಸಕ್ಕೆ ತೆರಳಿ ಅವರೊಂದಿಗೆ ಚರ್ಚೆ ನಡೆಸಿದರು.
‘ಸ್ವಾಧೀನ ಪಡಿಸಿಕೊಳ್ಳುವ ಪ್ರತಿ ಎಕರೆಗೆ ₹3.50 ಕೋಟಿ ಪರಿಹಾರ ನಿಗದಿ ಮಾಡಬೇಕು. ಭೂಮಿ ಕೊಡುವ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಉದ್ಯೋಗ ನೀಡಬೇಕು. ತಾಲ್ಲೂಕಿನ ಜಮೀನನ್ನು ಯಾವುದೇ ಕಾರಣಕ್ಕೂ ಹಸಿರು ವಲಯವನ್ನಾಗಿ ಘೋಷಿಸಬಾರದು. ಗ್ರಾಮದ ಅಕ್ಕಪಕ್ಕದ ಜಮೀನುಗಳನ್ನು ಹಳದಿ ವಲಯವನ್ನಾಗಿ ಪರಿವರ್ತಿಸಬೇಕು ಎಂಬ ಷರತ್ತುಗಳಿರುವ ಮನವಿ ಪತ್ರವನ್ನು ಸಲ್ಲಿಸಿದರು’ ಎಂದು ಮುಖ್ಯಮಂತ್ರಿ ಸಚಿವಾಲಯವು ತಿಳಿಸಿದೆ.
‘ಬೆವರ ಹನಿಗೆ ಗೌರವ ಕೊಡಿ’: ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನೆ ವೇಳೆ, ‘ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರಿ ಉದ್ಯೋಗ ನೀಡಿ’, ‘ರೈತರ ಭೂಮಿಗೆ ಮಾರುಕಟ್ಟೆ ದರ ಕೊಡಿ ಅಥವಾ ಪರ್ಯಾಯ ಭೂಮಿ ನೀಡಿ’, ‘ರೈತರ ಬೆವರ ಹನಿಗೆ ಗೌರವ ಕೊಡಿ’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಸಂಚಾಲಕರಾದ ಶ್ರೀನಿವಾಸ್, ಪ್ರಕಾಶ್ ದೊಡ್ಡೇಗೌಡ, ರಂಗಣ್ಣ, ಜಗದೀಶ್, ಭರತ್, ದೇವರಾಜ್ ರವರ ಜೊತೆಯಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಮಂತ್ರಿ ಸಭೆ ಭೂಸ್ವಾಧೀನಕ್ಕೆ ರೈತರ ವಿರೋಧ ವ್ಯಕ್ತವಾಗಿರುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸಚಿವರು ಹಾಗೂ ಕಾನೂನು ತಜ್ಞರ ಜತೆ ಸಭೆ ನಡೆಸಿದರು. ಸಚಿವ ಕೆ.ಎಚ್.ಮುನಿಯಪ್ಪ ಸಚಿವ ಬೈರತಿ ಸುರೇಶ್ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸಭೆಯಲ್ಲಿ ಇದ್ದರು.
ಭೂಸ್ವಾಧೀನಕ್ಕೆ ಮುಂದಾದರೆ ಸರ್ಕಾರ ಪತನ
ದೇವನಹಳ್ಳಿ: ಭೂಸ್ವಾಧೀನ ವಿರೋಧಿಸಿ ಸಾವಿರಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿರುವ ಚನ್ನರಾಯಪಟ್ಟಣದ ರೈತರ ಪರ ರಾಜ್ಯ ಸರ್ಕಾರ ಜುಲೈ 25ರಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಸರ್ಕಾರ ಪತನ ಆಗಬಹುದು ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ‘ಒಂದು ವೇಳೆ ಸರ್ಕಾರ ರೈತರ ವಿರುದ್ಧ ನಿರ್ಧಾರ ಕೈಗೊಂಡರೆ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತೇವೆ’ ಎಂದು ಸಂಘಟನೆಯ ಮುಖಂಡರು ಶನಿವಾರ ದೇವನಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು. ‘ಭೂಮಿ ಕೊಡುವುದಾಗಿ ಕೆಲವರು ಹೇಳುತ್ತಿದ್ದಾರೆ. ಹೋರಾಟ ನಿರ್ಣಾಯಕ ಹಂತ ತಲುಪಿರುವಾಗ ಈ ರೀತಿಯ ಹೇಳಿಕೆಗೆ ಸರ್ಕಾರದ ಪ್ರಚೋದನೆ ಕಾರಣ. ಚನ್ನರಾಯಪಟ್ಟಣ ಹೋಬಳಿ 13 ಹಳ್ಳಿ ರೈತರು ಜನರು ಒಗ್ಗೂಡಿ ಹೋರಾಡುತ್ತಿರುವಾಗ ಸರ್ಕಾರ ಆ ಒಗ್ಗಟ್ಟು ಮುರಿಯಲು ಭೂಸ್ವಾಧೀನ ಪರವಾದ ತಂಡ ಹುಟ್ಟು ಹಾಕಿದೆ. ಇದು ಸರ್ಕಾರಿ ಪ್ರಾಯೋಜಿತ ದಲ್ಲಾಳಿಗಳ ತಂಡ’ ಎಂದು ಹೋರಾಟಗಾರರು ಟೀಕಿಸಿದರು.
ಭೂಸ್ವಾಧೀನ ಕೈಬಿಡಿ: ಸಾಹಿತಿ ಹೋರಾಟಗಾರರ ಪತ್ರ ನವದೆಹಲಿ: ದೇವನಹಳ್ಳಿಯಲ್ಲಿ ರೈತರ ಜಮೀನು ಕಿತ್ತುಕೊಂಡು ಅಲ್ಲಿ 1700 ಎಕರೆಯಲ್ಲಿ ರಕ್ಷಣಾ ಕಾರಿಡಾರ್ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ. ಈ ಭೂಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿ ಸಾಹಿತಿಗಳು ಹೋರಾಟಗಾರರು ಹಾಗೂ ಚಿಂತಕರು ಕಾಂಗ್ರೆಸ್ ಹೈಕಮಾಂಡ್‌ಗೆ ಶನಿವಾರ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ರಾಮಚಂದ್ರ ಗುಹಾ ದೇವನೂರು ಮಹಾದೇವ ಪ್ರಕಾಶ್ ಕಮ್ಮರಡಿ ಅ.ನ. ಯಲ್ಲಪ್ಪ ರೆಡ್ಡಿ ಬಿ.ಜಯಶ್ರೀ ಪ್ರೊ.ಕೆ.ನಾರಾಯಣಗೌಡ ಡಾ.ಜಿ.ಎನ್.ದೇವಿ ಎಸ್.ಜಿ.ಸಿದ್ದರಾಮಯ್ಯ ಗಿರೀಶ್ ಕಾಸರವಳ್ಳಿ ಅರುಂಧತಿ ನಾಗ್ ಡಾ.ಕೆ.ಮರುಳಸಿದ್ಧಪ್ಪ ವಿಜಯಮ್ಮ ಸೇರಿದಂತೆ ವಿವಿಧ ಕ್ಷೇತ್ರಗಳ 65 ಸಾಧಕರು ಸಹಿ ಹಾಕಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ಜೈರಾಮ್ ರಮೇಶ್ ಅವರಿಗೆ ಈ ಪತ್ರ ಬರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.