ADVERTISEMENT

ಚಾಮರಾಜಪೇಟೆ ಮೈದಾನ: ಪೊಲೀಸ್ ಸರ್ಪಗಾವಲಿನಲ್ಲಿ ಧ್ವಜಾರೋಹಣ, ಈದ್ಗಾ ಸುತ್ತ ಭದ್ರತೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 21:03 IST
Last Updated 15 ಆಗಸ್ಟ್ 2022, 21:03 IST
ಚಾಮರಾಜಪೇಟೆ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.
ಚಾಮರಾಜಪೇಟೆ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.   

ಬೆಂಗಳೂರು: ಜಾಗದ ಮಾಲೀಕತ್ವ ವಿಚಾರವಾಗಿ ಹೆಚ್ಚು ಸುದ್ದಿಯಾಗಿದ್ದ ಚಾಮರಾಜಪೇಟೆ ಮೈದಾನದಲ್ಲಿ ಪೊಲೀಸರ ಸರ್ಪಕಾವಲಿನಲ್ಲಿ ಸೋಮವಾರ ಮೊದಲ ಬಾರಿಗೆ ತ್ರಿವರ್ಣ ಧ್ವಜಾರೋಹಣ ನೆರವೇರಿತು. ಮೈದಾನದ ಒಂದು ಬದಿಯಲ್ಲಿರುವ ಈದ್ಗಾ (ಗೋಡೆ) ಸುತ್ತಲೂ ಶಸ್ತ್ರಸಜ್ಜಿತವಾಗಿ ಗಸ್ತು ತಿರುಗಿದ ರಕ್ಷಣಾ ಪಡೆಗಳು, ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದವು.

ಸ್ಥಳೀಯವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದ ಪೊಲೀಸರು, ಮೈದಾನ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರು. ಈದ್ಗಾ ಇರುವ ಮೈದಾನದ ಅರ್ಧ ಭಾಗದಲ್ಲಿ ಜನರ ಪ್ರವೇಶ ನಿರ್ಬಂಧಿಸಲಾಗಿತ್ತು. ಇನ್ನರ್ಧ ಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರು ನಗರ ಜಿಲ್ಲೆಯ ಉಪ ವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ಅವರು ಬೆಳಿಗ್ಗೆ 8 ಗಂಟೆಗೆ ತಾತ್ಕಾಲಿಕ ಧ್ವಂಜಸ್ತಂಭದಲ್ಲಿ ಧ್ಜಜಾರೋಹಣ ಮಾಡಿದರು. ಸಂಸದ ಪಿ.ಸಿ. ಮೋಹನ್, ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್, ಹೆಚ್ಚುವರಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ, ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಜೊತೆಗಿದ್ದರು. ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಎಲ್ಲರೂ ಪುಷ್ಪನಮನ ಸಲ್ಲಿಸಿದರು. ಯಾರೊಬ್ಬರೂ ಸಾರ್ವಜನಿಕವಾಗಿ ಭಾಷಣ ಮಾಡಲಿಲ್ಲ.

ADVERTISEMENT

ಧ್ವಜಾರೋಹಣ ಬಳಿಕ ರಾಷ್ಟ್ರಗೀತೆ ಮೊಳಗಿತು. ಮೈದಾನದಲ್ಲಿದ್ದವರು ಹಾಗೂ ರಸ್ತೆಯಲ್ಲಿದ್ದವರೆಲ್ಲ ಎದ್ದು ನಿಂತು ಗೌರವ ಸೂಚಿಸಿದರು. ಶಾಲಾ ಮಕ್ಕಳು, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕಿರು ನಾಟಕ ಪ್ರಸ್ತುತಪಡಿಸಿದರು.

ಸಿಹಿ ಹಂಚಿದ ಸ್ಥಳೀಯರು: ಧ್ವಜಾರೋಹಣ ನೆರವೇರುತ್ತಿದ್ದಂತೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ನೇತೃತ್ವದಲ್ಲಿ ಸ್ಥಳೀಯರು ಪಟಾಕಿ ಸಿಡಿಸಿದರು. ಲಾಡು, ಹೋಳಿಗೆ ಸೇರಿ ವಿವಿಧ ಸಿಹಿ ಪದಾರ್ಥ ಹಂಚಿದರು. ಭಾರತ ಮಾತೆಗೆ ಜೈಕಾರ ಕೂಗಿದರು. ಉದ್ದದ ತ್ರಿವರ್ಣ ಧ್ವಜ‌ ಹಿಡಿದು ರಸ್ತೆಯುದ್ದಕ್ಕೂ ಮೆರವಣಿಗೆ ಸಹ‌ ನಡೆಸಿದರು.

‘ಮೈದಾನದಲ್ಲಿ ಧ್ವಜಾರೋಹಣ ಆಗಬೇಕೆಂಬುದು ಹಲವು ವರ್ಷಗಳ ಕನಸಾಗಿತ್ತು. ಈ ವರ್ಷ ನನಸಾಗಿದೆ. ರಾಜ್ಯ ಸರ್ಕಾರವೇ ಧ್ವಜಾರೋಹಣ ಮಾಡುತ್ತಿರುವುದು ಸಂಭ್ರಮ ತಂದಿದೆ’ ಎಂದು ಒಕ್ಕೂಟ ವೇದಿಕೆ ಸದಸ್ಯರು ಖುಷಿ ವ್ಯಕ್ತಪಡಿಸಿದರು.

ಮೈದಾನದೊಳಗೆ ಹೋಗುವ ವಿಚಾರವಾಗಿ ವೇದಿಕೆ ಸದಸ್ಯರು ಹಾಗೂ ಪೊಲೀಸರ ನಡುವೆ ಜಟಾಪಟಿಯೂ ನಡೆಯಿತು. ಮಧ್ಯಪ್ರವೇಶಿಸಿದ ಹಿರಿಯ ಅಧಿಕಾರಿಗಳು, ಪರಿಸ್ಥಿತಿ ತಿಳಿಗೊಳಿಸಿದರು.

ಪೊಲೀಸರ ಕಾವಲು: ಗರುಡಾ ಹಾಗೂ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌)ಸಿಬ್ಬಂದಿ ಜೊತೆಯಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

200ಕ್ಕೂ ಹೆಚ್ಚು ಪೊಲೀಸರ ಕಾವಲು
ಗರುಡಾ ಹಾಗೂ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌) ಸಿಬ್ಬಂದಿ ಜೊತೆಯಲ್ಲಿ 200ಕ್ಕೂ ಹೆಚ್ಚು ಪೊಲೀಸರು ಮೈದಾನಕ್ಕೆ ಭದ್ರತೆ ನೀಡಿದ್ದರು. ಈದ್ಗಾ ಆವರಣಕ್ಕೆ ಯಾರೊಬ್ಬರೂ ಬಾರದಂತೆ ನೋಡಿಕೊಂಡರು. ಚಾಮರಾಜಪೇಟೆ ಒಳರಸ್ತೆ ಹಾಗೂ ಪ್ರಮುಖ ವೃತ್ತಗಳಲ್ಲೂ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಮೈದಾನದೊಳಗೆ ಬರುವವರನ್ನು ಲೋಹಶೋಧಕದ ಮೂಲಕ ತಪಾಸಣೆ ನಡೆಸಲಾಯಿತು. ಡ್ರೋನ್ ಮೂಲಕವೂ ಜನರ ಮೇಲೆ ಕಣ್ಣಿಡಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ತಾತ್ಕಾಲಿಕ ಧ್ವಜಸ್ತಂಭವಿದ್ದ ಜಾಗಕ್ಕೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಯಿತು. ಹಿರಿಯ ಅಧಿಕಾರಿಗಳು ಮೈದಾನದಲ್ಲೇ ಮೊಕ್ಕಾಂ ಹೂಡಿ, ಧ್ವಜಕ್ಕೆ ಕಾವಲಾಗಿದ್ದರು. ರಕ್ಷಣಾ ಪಡೆಗಳ ಜೊತೆಯಲ್ಲಿ ಸ್ಥಳೀಯರು ಫೋಟೊ ತೆಗೆಸಿಕೊಂಡ ಹಾಗೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ದೃಶ್ಯಗಳು ಕಂಡುಬಂದವು.

ಮೈದಾನದಲ್ಲಿ ಧ್ವಜಾರೋಹಣ ಮಾಡಬೇಕೆಂದು ಹಿಂದೆಯೇ ಹೇಳಿದ್ದೆ. ನನ್ನ ಕನಸು ಇಂದು ನನಸಾಗಿದೆ. ನವೆಂಬರ್ 1 ಹಾಗೂ ಜನವರಿ 26ರಂದೂ ಧ್ವಜಾರೋಹಣ ಮಾಡುತ್ತೇನೆ.
–ಜಮೀರ್ ಅಹ್ಮದ್ ಖಾನ್, ಚಾಮರಾಜಪೇಟೆ ಕ್ಷೇತ್ರದ ಶಾಸಕ

*

ಮೈದಾನದಲ್ಲಿ ಧ್ವಜಾರೋಹಣ ಆಗುತ್ತಿಲ್ಲವೆಂಬ ದುಃಖ ಸ್ಥಳೀಯರಲ್ಲಿತ್ತು. ಇಂದು ಅವರಿಗೆಲ್ಲ ಖುಷಿಯಾಗಿದೆ. ಕಂದಾಯ ಇಲಾಖೆ ಈ ಜಾಗದಲ್ಲೇ ಶಾಶ್ವತ ಧ್ವಜಸ್ತಂಭ ನಿರ್ಮಿಸಲು ಚಿಂತನೆ ನಡೆಸುತ್ತೇವೆ.
–ಪಿ.ಸಿ.ಮೋಹನ್, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.