ADVERTISEMENT

ಭೂ ದಾಖಲೆಗಳ ಡಿಜಿಟಲೀಕರಣ ಆರು ತಿಂಗಳಲ್ಲಿ ಪೂರ್ಣ: ಕೃಷ್ಣ ಬೈರೇಗೌಡ

ಎಸಿ ಕಚೇರಿಯ ದಾಖಲೆಗಳ ಸ್ಕ್ಯಾನಿಂಗ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 16:51 IST
Last Updated 5 ಜನವರಿ 2026, 16:51 IST
ಉಪವಿಭಾಗಾಧಿಕಾರಿ ಕಚೇರಿಗಳಲ್ಲಿನ ಕಂದಾಯ ದಾಖಲೆಗಳ ಡಿಜಿಟಲೀಕರಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಚಾಲನೆ ನೀಡಿದರು.
ಉಪವಿಭಾಗಾಧಿಕಾರಿ ಕಚೇರಿಗಳಲ್ಲಿನ ಕಂದಾಯ ದಾಖಲೆಗಳ ಡಿಜಿಟಲೀಕರಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಚಾಲನೆ ನೀಡಿದರು.   

ಬೆಂಗಳೂರು: ‌ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿ ಬಳಿಕ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ಕಂದಾಯ ದಾಖಲೆಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣಕ್ಕೆ ಚಾಲನೆ ನೀಡಿದ್ದು, ಕಂದಾಯ ಇಲಾಖೆಯಂತೆ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ದಾಖಲೆಗಳೂ ಗಣಕೀಕರಣಗೊಳ್ಳಲಿವೆ.

ಬೆಂಗಳೂರು ಉತ್ತರ ಹಾಗೂ ದಕ್ಷಿಣ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಭೂಸುರಕ್ಷಾ ಯೋಜನೆಗೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಒಂದು ವರ್ಷದ ಹಿಂದೆಯೇ 240 ತಾಲ್ಲೂಕು ಕಚೇರಿಗಳಲ್ಲಿನ 100 ಕೋಟಿ ಪುಟಗಳ ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗಿತ್ತು. ಈಗಾಗಲೇ 62 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಪೋರ್ಟಲ್‌ಗೆ ಹಾಕಲಾಗಿದೆ. 70 ತಾಲ್ಲೂಕು ಕಚೇರಿಯಲ್ಲಿ ಈ ಕೆಲಸ ಪೂರ್ಣ ಮುಗಿದಿದೆ. ಉಳಿದ ಕಡೆ ಆರು ತಿಂಗಳಲ್ಲಿ ಮುಗಿಯುವ ವಿಶ್ವಾಸವಿದೆ. ತಾಲ್ಲೂಕು ಕಚೇರಿಗಳಿಂದ 39,39,569 ಪುಟಗಳ ದಾಖಲೆಯನ್ನು ಜನರು ಆನ್‌ಲೈನ್‌ ಮೂಲಕವೇ ಪಡೆದುಕೊಂಡಿದ್ದಾರೆ’ ಎಂದರು.

‘ಈಗಾಗಲೇ ಅಪ್ಲೋಡ್‌ ಆಗಿರುವ ದಾಖಲೆಗಳ ನೈಜತೆ ಅರಿಯುವಂತೆ ಸುತ್ತೋಲೆ ಹೊರಡಿಸಲಾಗಿದೆ. ದಾಖಲೆಗಳ ತಿದ್ದುಪಡಿ, ನಕಲು ಮಾಡಿ ದಾಖಲೆ ಅಪ್ಲೋಡ್‌ ಮಾಡಿದ್ದರೆ ಅಂತ ಅಧಿಕಾರಿಗಳ ವಿರುದ್ದ ಕ್ರಮ ಆಗಲಿದೆ. ಪ್ರತಿಯೊಂದು ಅನುಮಾನಾಸ್ಪದ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ಫೋರೆನ್ಸಿಕ್ ಲ್ಯಾಬ್‌ಗೆ ಕಳಿಸಿ ದಾಖಲೆಗಳ ನೈಜತೆ ಕುರಿತ ವರದಿ ಪಡೆದು ಸೂಕ್ತ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್‌ ಕುಮಾರ್ ಕಟಾರಿಯಾ, ಆಯುಕ್ತರಾದ ಮೀನಾ ನಾಗರಾಜ್‌, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ವೆಂಕಟರಾಜಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಅವರು ಜನನಾಯಕ ಅಷ್ಟೇ ಅಲ್ಲ. ಅತ್ಯುತ್ತಮ ಆಡಳಿತಗಾರ. ಅವರು ಹೆಚ್ಚು ದಿನ ಆಡಳಿತದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಎನ್ನುವ ದಾಖಲೆ ನಿರ್ಮಿಸಿರುವುದು ಯಾವುದೇ ನಾಯಕರಿಗೆ ಗೌರವ ತರುವಂತದ್ದು.
-ಕೃಷ್ಣ ಬೈರಢಗೌಡ, ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.