ಬೆಂಗಳೂರು: ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಾಯೋಗಿಕ ವಿಧಾನದ ಮೂಲಕ ಗಣಿತವನ್ನು ಸುಲಭವಾಗಿ ಕಲಿಯಲು ಅನುವು ಮಾಡಿಕೊಡುವ ‘ಧಾತು’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬೆಂಗಳೂರಿನ ‘ಪ್ರಯೋಗ’ ಶಿಕ್ಷಣ ಸಂಶೋಧನಾ ಸಂಸ್ಥೆಯು 9–12ನೇ ತರಗತಿಯ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪಠ್ಯಕ್ರಮದ ಆಧಾರದಲ್ಲಿ ‘ಧಾತು’ ಕಾರ್ಯಕ್ರಮವನ್ನು ಅಭಿವೃದ್ಧಿ ಪಡಿಸಿದ್ದು, 2025–26ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. 2027ರಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ.
ಜೆಇಇಯಂಥ ರಚನಾತ್ಮಕ ಮೌಲ್ಯಮಾಪನಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಧಾತು, ವಿದ್ಯಾರ್ಥಿಗಳಿಗೆ ಸರಿಯಾದ ಉತ್ತರ ನೀಡುವುದಕ್ಕೆ ಮಾರ್ಗದರ್ಶನ ಮಾಡಲಿದೆ. ಸಂದರ್ಭೋಚಿತ ಸುಳಿವುಗಳೊಂದಿಗೆ ಬಹು-ಆಯ್ಕೆಯ ಸ್ವರೂಪವನ್ನು ಬಳಸುತ್ತದೆ. ವಿದ್ಯಾರ್ಥಿಗಳು ತಪ್ಪುಗಳನ್ನು ಮಾಡುವ ಸಾಧ್ಯತೆಯಿರುವ ಪ್ರಮುಖ ಅಂಶಗಳನ್ನು ಇದು ಗುರುತಿಸುತ್ತದೆ. ಶಿಕ್ಷಕರಿಗೆ ಮೌಲ್ಯಮಾಪನವನ್ನೂ ಸುಲಭಗೊಳಿಸಲಿದೆ ಎಂದು ‘ಪ್ರಯೋಗ’ ತಿಳಿಸಿದೆ.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಭಯ್ ಕರಂಡಿಕರ್ ಮಾತನಾಡಿ, ‘ಪ್ರಯೋಗವು ಶಿಕ್ಷಣ ಸಂಶೋಧನೆಯಲ್ಲಿ ನಾವೀನ್ಯಕ್ಕೆ ಚಾಲನೆ ನೀಡುತ್ತಿದೆ. ದೇಶದಾದ್ಯಂತ ಸ್ಟೆಮ್ ಕಲಿಕೆಗೆ ಒಂದು ಮಾದರಿಯನ್ನು ಸೃಷ್ಟಿಸುತ್ತಿದೆ’ ಎಂದು ಹೇಳಿದರು.
‘ಒಂದು ಕಾಲದಲ್ಲಿ ಗಣಿತವು ಭಾರತದ ಶಕ್ತಿಯಾಗಿತ್ತು. ಈಗ ಪ್ರೌಢಶಾಲಾ ಮಟ್ಟದ ಶೇ 80ರಷ್ಟು ವಿದ್ಯಾರ್ಥಿಗಳು ಗಣಿತ ಅಂದರೆ ಆತಂಕಪಡುತ್ತಾರೆ. ತಂತ್ರಜ್ಞಾನವು ನಮ್ಮ ಭವಿಷ್ಯವನ್ನು ರೂಪಿಸುತ್ತಿರುವುದರಿಂದ, ಗಣಿತವು ಎಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದೆ’ ಎಂದು ವಿವರಿಸಿದರು.
‘ಗಣಿತ ವಿಷಯದಲ್ಲಿ ಅನೇಕ ವಿದ್ಯಾರ್ಥಿಗಳು ಎದುರಿಸುತ್ತಿರುವ ಭಯ ಮತ್ತು ಆತಂಕವನ್ನು ನಿವಾರಿಸಲು ‘ಧಾತು’ವನ್ನು ಅಭಿವೃದ್ಧಿಪಡಿಸಲಾಗಿದೆ. ಶಿಕ್ಷಕರು ಪ್ರತಿ ವಿದ್ಯಾರ್ಥಿಗೂ ತಮ್ಮದೇ ಆದ ವೇಗದಲ್ಲಿ ಮಾರ್ಗದರ್ಶನ ಮಾಡಲು ಸಹಾಯ ಮಾಡುತ್ತದೆ’ ಎಂದು ‘ಪ್ರಯೋಗ’ದ ವ್ಯವಸ್ಥಾಪಕ ಟ್ರಸ್ಟಿ ವಲ್ಲೀಶ್ ಹೇರೂರ್ ಮಾಹಿತಿ ನೀಡಿದರು.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ (ಎಮೆರಿಟಸ್) ಪ್ರಾಧ್ಯಾಪಕ ಜೆಫ್ರಿ ಡಿ. ಉಲ್ಮನ್, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕ ವೈ. ನರಹರಿ ಮತ್ತು ಐಐಇಎಸ್‌ಟಿ ಅಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.