ಪಿ.ಪ್ರಸನ್ನ ಕುಮಾರ್ ಹಾಗೂ ಎಂ.ಎಸ್.ಶ್ಯಾಮ್ ಸುಂದರ್
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ, ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗದ ವಿಶೇಷ ಸಂದರ್ಶನ ಪ್ರಾಧ್ಯಾಪಕರನ್ನಾಗಿ, ಸಿಬಿಐ–ಎನ್‌ಐಎ ವಿಶೇಷ ಪ್ರಾಸಿಕ್ಯೂಟರ್, ಪಿ.ಪ್ರಸನ್ನ ಕುಮಾರ್ ಮತ್ತು ಹೈಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಎಂ.ಎಸ್.ಶ್ಯಾಮ್‌ಸುಂದರ್ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
‘ಯಾವುದೇ ಸಂಭಾವನೆ, ಪ್ರಯಾಣ ಭತ್ಯೆ (ಟಿಎ) ಮತ್ತು ದಿನಭತ್ಯೆಯ (ಡಿಎ) ಫಲಾಪೇಕ್ಷೆ ಇಲ್ಲದೆ ಇಬ್ಬರೂ ವಕೀಲರು 2025-26 ಮತ್ತು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಬೋಧನೆ ಮಾಡಲು ಸಮ್ಮತಿಸಿದ್ದಾರೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಉಭಯ ವಕೀಲರು ಸುಪ್ರೀಂ ಕೋರ್ಟ್, ಕರ್ನಾಟಕ, ಬಾಂಬೆ, ಮದ್ರಾಸ್ ಹೈಕೋರ್ಟ್‌ಗಳು, ವಿಚಾರಣಾ ನ್ಯಾಯಾಲಯಗಳು, ಸೆಷನ್ಸ್ ಮತ್ತು ವಿಶೇಷ ಕೋರ್ಟ್‌ಗಳು, ಕೇಂದ್ರ ಹಾಗೂ ರಾಜ್ಯದ ನ್ಯಾಯಮಂಡಳಿಗಳಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಕಾಲ ವಾದಿಗಳು, ಆರೋಪಿಗಳು ಮತ್ತು ಪ್ರತಿವಾದಿಗಳ ಪರ ಎರಡೂ ಧ್ರುವಗಳಲ್ಲಿ ನಿಂತು ವಕೀಲಿಕೆ ನಡೆಸಿರುವ ಅನುಭವ ಹೊಂದಿದ್ದಾರೆ.
ಪಿ.ಪ್ರಸನ್ನಕುಮಾರ್ ಬಿ.ಎ, ಎಲ್‌ಎಲ್.ಬಿ ಪದವೀಧರರು. ಅಂತೆಯೇ, ಹೈದರಾಬಾದ್‌ನ ನಲ್ಸಾರ್ (ಎನ್‌ಎಎಲ್‌ಎಸ್‌ಎಆರ್) ವಿಶ್ವವಿದ್ಯಾಲಯದಲ್ಲಿ ‘ಪರ್ಯಾಯ ವಿವಾದಗಳ ನಿರ್ಣಯ’ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ.
ಎಂ.ಎಸ್.ಶ್ಯಾಮ್‌ಸುಂದರ್ ಬೆಂಗಳೂರು ವಿಶ್ವವಿದ್ಯಾಲಯದ ಎಲ್‌ಎಲ್‌ಎಂ ಸ್ನಾತಕೋತ್ತರ ಪದವೀಧರ. ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯ, ಕೆಇಟಿ ಕಾಲೇಜು, ಕೋಚಿಂಗ್ ಕೇಂದ್ರ, ವಿವಿಧ ಸಂಸ್ಥೆಗಳು ಮತ್ತು ಅಕಾಡೆಮಿಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕ್ರಿಮಿನಲ್, ಸಿವಿಲ್, ಕಾರ್ಪೊರೇಟ್, ವೈವಾಹಿಕ ವಿವಾದಗಳೂ ಸೇರಿದಂತೆ ರಿಟ್ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.