ADVERTISEMENT

ಚಪ್ಪಲಿ ಏಟು: ವಕೀಲೆಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 28 ಮೇ 2022, 20:29 IST
Last Updated 28 ಮೇ 2022, 20:29 IST

ಬೆಂಗಳೂರು: ಮಹಾಂತೇಶ ಚೊಳಚ ಗುಡ್ಡ ಎಂಬುವವರಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹೊಡೆದ ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆಯ ವಕೀಲೆ ಸಂಗೀತಾ ಶಿಕ್ಕೇರಿ ಅವರಿಗೆ ರಾಜ್ಯ ವಕೀಲರ ಪರಿಷತ್‌ ವಿವರಣೆ ಕೇಳಿ ನೋಟಿಸ್‌ ನೀಡಿದೆ.

ರಾಜ್ಯ ವಕೀಲರ ಪರಿಷತ್‌ನ ಕಾರ್ಯದರ್ಶಿ ಪುಟ್ಟೇಗೌಡ ಈ ಸಂಬಂಧ ಇದೇ 26ರಂದು ನೋಟಿಸ್ ಜಾರಿಗೊಳಿಸಿದ್ದು, ಈ ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ನಿಮ್ಮ ಅಂದಿನ ಘಟನೆಯಲ್ಲಿ ತೋರಿದ ನಡವಳಿಕೆಗಾಗಿ ವಿವರಣೆ ನೀಡಬೇಕು ಎಂದು ಸೂಚಿಸಿದೆ.

ಇದೇ 14ರಂದು ಬಾಗಲಕೋಟೆಯ ವಕೀಲೆ ಸಂಗೀತಾ ಶಿಕ್ಕೇರಿ ಅವರಿಗೆ ಮಹಾಂತೇಶ ಚೊಳಚುಗುಡ್ಡ ಕಾಲಿನಿಂದ ಒದೆಯುತ್ತಿರುವುದು ವಿಡಿಯೊದಲ್ಲಿ ದಾಖಲಾಗಿ ಸಾಮಾಜಿಕ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು.

ADVERTISEMENT

ವಕೀಲೆಯೊಬ್ಬರ ಮೇಲೆ ನಡೆದಂತಹ ಈ ಘಟನೆಯನ್ನುರಾಜ್ಯ ವಕೀಲರ ಸಂಘ ಮತ್ತು ಪರಿಷತ್‌ ತೀವ್ರವಾಗಿ ಖಂಡಿಸಿದ್ದವು. ಆದರೆ, ಕೆಲ ದಿನಗಳ ಬಳಿಕ ಇದಕ್ಕೆ ತದ್ವಿರುದ್ಧವಾಗಿ ಸಂಗೀತಾ ಶಿಕ್ಕೇರಿ ಅವರು ಮಹಾಂತೇಶ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಚಪ್ಪಲಿಯಿಂದ ಹೊಡೆದ ವಿಡಿಯೊ ದೃಶ್ಯಗಳು ಬಯಲಾಗಿದ್ದವು.

‘ನಿಮ್ಮ ನಡವಳಿಕೆ ವಕೀಲರ ಕಾಯ್ದೆ–1961ಕ್ಕೆ ವಿರುದ್ಧವಾಗಿದೆ. ಉದಾತ್ತವಾದ ವಕೀಲಿ ವೃತ್ತಿಯ ಘನತೆಗೆ ತಮ್ಮ ನಡವಳಿಕೆ ತಕ್ಕುದ್ದಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.