ಬೆಂಗಳೂರು: ‘ಜಗತ್ತನ್ನು ಬದಲಾಯಿಸಬಲ್ಲ ಕೀಲಿ ಕೈ ನಮ್ಮ ಬಳಿಯೇ ಇದ್ದು, ಅದನ್ನು ಸೂಕ್ತ ಸಮಯದಲ್ಲಿ ಬಳಸಿ’ ಎಂದು ಮಿಟ್ಟಿ ಕೆಫೆ ಸಂಸ್ಥಾಪಕಿ ಹಾಗೂ ಸಿಇಒ ಅಲೀನಾ ಆಲಂ ಹೇಳಿದರು.
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ(ಆರ್‌ಐಎಂ) 29ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಸಮಾಜವನ್ನು ರೂಪಿಸುವ ಕೆಲಸ ಎಲ್ಲರಿಂದಲೂ ಆಗಬೇಕು. ಇದರಲ್ಲಿ ಪ್ರತಿ ವ್ಯಕ್ತಿಯ ಒಳಗೊಳ್ಳುವಿಕೆ, ಘನತೆ ಮುಖ್ಯವಾದದು’ ಎಂದು ಹೇಳಿದರು.
‘ಏನನ್ನಾದರೂ ಬದಲಾವಣೆ ಮಾಡಬೇಕು ಎಂದು ಬಯಸಿದಾಗ ಸಮುದಾಯದ ಬೆಂಬಲ ಬೇಕಾಗುತ್ತದೆ. ಧೈರ್ಯ, ಗಟ್ಟಿತನದ ನಿರ್ಧಾರಗಳು ಮುಖ್ಯ ಪಾತ್ರ ವಹಿಸುತ್ತವೆ. ಸೂಕ್ತ ಗುರಿ, ಉದ್ದೇಶದೊಂದಿಗೆ ಕೆಲಸ ಮಾಡಿದಾಗ ಯಶಸ್ಸು ತಾನಾಗಿಯೇ ಬರುತ್ತದೆ. ಆಲೋಚನೆಗಳೂ ಯಶಸ್ವಿಯಾಗುತ್ತವೆ’ ಎಂದು ತಾವು ಕಟ್ಟಿ ಬೆಳೆಸಿದ ಮಿಟ್ಟಿಕಥೆಯ ಯಶಸ್ಸಿನ ಹಾದಿಯನ್ನು ಬಿಡಿಸಿಟ್ಟರು.
ಗೋಕುಲ್ ಎಜುಕೇಷನ್ ಫೌಂಡೇಷನ್( ಜಿಇಎಫ್) ಅಧ್ಯಕ್ಷ ಡಾ.ಎಂ.ಆರ್.ಸೀತಾರಾಮ್, ಆರ್‌ಐಎಂ ನಿರ್ದೇಶಕ ಹಾಗೂ ಜಿಇಎಫ್ ಟ್ರಸ್ಟಿ ಡಾ.ಎಂ.ಆರ್.ಪಟ್ಟಾಭಿರಾಮ್ ಅವರು, ‘ರಾಮಯ್ಯ ಶಿಕ್ಷಣ ಸಂಸ್ಥೆಯು ಮೌಲ್ಯಾಧಾರಿತ ಶಿಕ್ಷಣ ಹಾಗೂ ಪ್ರಗತಿಯ ಮೂಲಕ ತನ್ನ ಪರಂಪರೆಯನ್ನು ಮುಂದುವರೆಸಿದೆ. ವಿದ್ಯಾರ್ಥಿ ಸಮೂಹ ಇದರ ಉಪಯೋಗ ಪಡೆದುಕೊಂಡು ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಡೀನ್ ಡಾ.ಅರುಣ್‌ಕುಮಾರ್ ಅವರು ವಾರ್ಷಿಕ ವರದಿ ಮಂಡಿಸಿದರು. ಫೌಂಡೇಷನ್ ನಿರ್ದೇಶಕ ಹಾಗೂ ಕಾರ್ಯದರ್ಶಿ ಎಂ.ಆರ್.ಆನಂದರಾಮ್, ಮುಖ್ಯ ಕಾರ್ಯನಿರ್ವಾಹಕ ಎಚ್.ವಿ.ಪಾರ್ಶ್ವನಾಥ್, ಮುಖ್ಯ ಶೈಕ್ಷಣಿಕ ಸಲಹೆಗಾರ ಕರಿಸಿದ್ದಪ್ಪ, ಹಣಕಾಸು ಮುಖ್ಯಾಧಿಕಾರಿ ಜಿ.ರಾಮಚಂದ್ರ, ಆರ್‌ಐಎಂ ರಿಜಿಸ್ಟ್ರಾರ್ ಸವಿತಾರಾಣಿ ಉಪಸ್ಥಿತರಿದ್ದರು.
ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಪೂಜಾ ಸಾಸನೂರು, ಯಶಸ್ವಿ ಶರ್ಮ, ಎಸ್.ಆಕಾಂಕ್ಷ, ಚಿಂತಿಲಾ ರಮ್ಯಾ, ಕೆ.ವಲ್ಲಿಯಪ್ಪನ್, ಜಿ.ವಿಘ್ನೇಶ್ ಅವರು ಚಿನ್ನ ಹಾಗೂ ಬೆಳ್ಳಿ ಪದಕ ಸ್ವೀಕರಿಸಿದರು. 280 ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.