ಬೆಂಗಳೂರು: ‘ದಲಿತ ಸಂಘರ್ಷ ಸಮಿತಿಯು ಚಳವಳಿ ಮೂಲಕ ನಮಗೆ ಶಕ್ತಿ ಕೊಟ್ಟಿದೆ. ಅದರ ಜೊತೆಗೆ ಎಲ್ಲ ಧಾರ್ಮಿಕ ಚಿಂತನೆಗಳ ಅಧ್ಯಾತ್ಮಿಕ ಹಸಿವನ್ನು ಒಂದುಗೂಡಿಸುವ ತಾಯಿಮಡಿಲು ದಯಾ ಸಮ್ಯಕ್ ಸಭಾ (ಡಿಎಸ್‌ಎಸ್) ಆಗಲಿ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಆಶಿಸಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಸೋಮವಾರ ಹಮ್ಮಿಕೊಂಡಿದ್ದ ‘ದಲಿತ ಚಳವಳಿ ಮತ್ತು ಸಮಕಾಲೀನ ಕರ್ನಾಟಕ’ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕಪ್ಪು ನಮ್ಮ ಗುರುತು, ಕಾಯಕ ನಮ್ಮ ವಿಳಾಸ, ಸಂವಿಧಾನದಿಂದಾಗಿ ಶಿಕ್ಷಣ ನಮ್ಮ ರಕ್ತವಾಗಿದೆ. ಈ ರಕ್ತ ಕುದಿದರೆ ಭಾರತವೇ ನಮ್ಮ ವಿಳಾಸವಾಗುತ್ತದೆ. ನಮ್ಮ ಅಧ್ಯಾತ್ಮದ ಚಿಕ್ಕ ಚಿಕ್ಕ ಘಟಕಗಳು ದೇಶದ ತುಂಬಾ ಹರಡಿವೆ. ಅವುಗಳನ್ನೆಲ್ಲ ಒಗ್ಗೂಡಿಸಬೇಕು’ ಎಂದು ಸಲಹೆ ನೀಡಿದರು.
‘ಸಂವಿಧಾನಕ್ಕೆ ಒಂದು ಲಯ ಇದೆ. ಯಾವುದೇ ತಾಳಕ್ಕೆ ರಾಗ ಸಂಯೋಜನೆ ಮಾಡಿದರೂ ಸರಿಯಾಗಿ ಹೊಂದಿಕೊಳ್ಳುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಉತ್ತಮ ಪಿಟೀಲು ವಾದಕರಾಗಿದ್ದರು. ಉತ್ತಮ ಚಿತ್ರ ಕಲಾವಿದರೂ ಆಗಿದ್ದುದು ಇದಕ್ಕೆ ಕಾರಣ. ಸಮಾಜದ ಲಯವನ್ನು ಸರಿಯಾದ ಸ್ಥಿತಿಗೆ ತರಬೇಕು ಎಂಬ ಕಾರಣಕ್ಕಾಗಿ ಪಿಟೀಲು ಮತ್ತು ಕುಂಚವನ್ನು ಪಕ್ಕಕ್ಕೆ ಇಟ್ಟು ಪೆನ್ನು ಹಿಡಿದಿದ್ದರು’ ಎಂದರು.
‘ಡಿಎಸ್‌ಎಸ್ ಹೋರಾಟದ ಜೊತೆಗೆ ಕನ್ನಡವನ್ನು ಅಪ್ಪಿಕೊಳ್ಳಬೇಕು. ಕನ್ನಡದ ಹೆಸರಿನಲ್ಲಿ ನಾವೆಲ್ಲ ಒಂದಾಗಬೇಕು. ಸಂಗೀತವನ್ನು ಅಳವಡಿಸಿಕೊಳ್ಳಬೇಕು. ಸಾಹಿತ್ಯ ಓದುವುದನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣ, ಸಂಘಟನೆ, ಹೋರಾಟದ ಜೊತೆಗೆ ಒಡನಾಟವನ್ನೂ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ದಸಂಸ (ಅಂಬೇಡ್ಕರ್‌ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಬಿ.ಕೃಷ್ಣಪ್ಪ ಟ್ರಸ್ಟ್ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ, ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ವಿಚಾರ ಮಂಡನೆ ಮಾಡಿದರು. ರಾಮದೇವ ರಾಕೆ, ವಿ. ನಾಗರಾಜ್, ಎನ್. ಮುನಿಸ್ವಾಮಿ, ಕುಂದೂರು ತಿಮ್ಮಯ್ಯ, ರಮೇಶ್ ಡಾಕುಳಕಿ ಅನುಭವ ಹಂಚಿಕೊಂಡರು.
ಮಟ್ಟು ಮಾತಿಗೆ ಆಕ್ಷೇಪ
‘ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣವನ್ನು ಪರಿಶಿಷ್ಟ ಸಮುದಾಯದವರನ್ನು ಒಳಗೊಳ್ಳುವ ಇತರ ಯೋಜನೆಗಳಿಗೆ ಬಳಸಿಕೊಳ್ಳಲು ಸೆಕ್ಷನ್ ‘7ಸಿ’ಯಲ್ಲಿ ಅವಕಾಶ ಇದೆ. ಹಿಂದಿನ ಸರ್ಕಾರವೂ ಬಳಸಿಕೊಂಡಿದೆ. ಈಗ ಗ್ಯಾರಂಟಿ ಯೋಜನೆಗಳಿಗೂ ‘7ಸಿ’ ಸೆಕ್ಷನ್‌ನಂತೆ ಕಾನೂನು ಪ್ರಕಾರವೇ ಬಳಕೆಯಾಗಿದೆ. ಗೃಹಲಕ್ಷ್ಮಿ ಗೃಹಜ್ಯೋತಿ ಯೋಜನೆಗಳಡಿ ಎಷ್ಟು ಎಸ್‌ಸಿ–ಎಸ್‌ಟಿ ಫಲಾನುಭವಿಗಳಿದ್ದಾರೆ ಎಂಬ ಖಚಿತ ಅಂಕಿ ಅಂಶ ಇರುತ್ತದೆ. ಆದರೆ ಪ್ರಯಾಣಿಕರು ಯಾವ ಜಾತಿ ಸಮುದಾಯದವರು ಎಂಬುದು ಗೊತ್ತಾಗದೇ ಇರುವ ‘ಶಕ್ತಿ’ ಯೋಜನೆಗೆ ಬಳಸಿದ್ದು ಮಾತ್ರ ತಪ್ಪು’ ಎಂದು ಪತ್ರಕರ್ತ ದಿನೇಶ್ ಅಮಿನ್ ಹೇಳಿದರು. ಇದಕ್ಕೆ ಸಭೆಯಲ್ಲಿದ್ದವರೊಬ್ಬರು ‘ಕಾಂಗ್ರೆಸ್ ಪರ ವಕಾಲತ್ತು ವಹಿಸುವುದಾದರೆ ಮಾತು ನಿಲ್ಲಿಸಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ‘ಬೇರೆ ಯೋಜನೆಗಳಿಗೆ ಬಳಸುವುದು ಬೇಡ ಎಂದಾದರೆ ‘7ಸಿ’ ರದ್ದತಿಗೆ ಒತ್ತಾಯಿಸಬೇಕು. ‘7ಡಿ’ ರದ್ದು ಮಾಡಲು ಹಿಂದೆ ಹೋರಾಟ ಮಾಡುತ್ತಿದ್ದಾಗ ‘7ಸಿ’ಯನ್ನೂ ಗಮನಿಸಬೇಕಿತ್ತು’ ಎಂದು ಮಟ್ಟು ಸಮರ್ಥಿಸಿಕೊಂಡರು. ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಬಿಟ್ಟು ಬೇರೆ ರಾಜ್ಯಗಳಲ್ಲಿ ಇಂತಹ ಕಾಯ್ದೆಯಿಲ್ಲ. ಕೇಂದ್ರದಲ್ಲಿಯೂ ಇಂತಹ ಯೋಜನೆ ಜಾರಿ ಮಾಡಲು ಒತ್ತಾಯಿಸಬೇಕು. ಖಾಸಗಿ ಉದ್ಯೋಗದಲ್ಲಿ ಮೀಸಲಾತಿ ತರಲು ಹೋರಾಟ ನಡೆಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.