ADVERTISEMENT

ದೇವಸ್ಥಾನದ ವಿವರ ವೈಜ್ಞಾನಿಕವಾಗಿ ದಾಖಲಾಗಲಿ: ರಾಮಾನುಜ ಜೀಯರ್ ಸ್ವಾಮೀಜಿ

ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 16:25 IST
Last Updated 12 ಮಾರ್ಚ್ 2023, 16:25 IST
ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಮಾತನಾಡಿದರು. ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷ ಪ್ರೊ.ಕೃ. ನರಹರಿ ಹಾಗೂ ಉಪಾಧ್ಯಕ್ಷ ಎಂ. ಕೊಟ್ರೇಶ್ ಇದ್ದಾರೆ.
ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಮಾತನಾಡಿದರು. ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷ ಪ್ರೊ.ಕೃ. ನರಹರಿ ಹಾಗೂ ಉಪಾಧ್ಯಕ್ಷ ಎಂ. ಕೊಟ್ರೇಶ್ ಇದ್ದಾರೆ.   

ಬೆಂಗಳೂರು: ‘ದೇಶದಲ್ಲಿರುವ ದೇವಸ್ಥಾನಗಳ ಎಲ್ಲ ವಿವರಗಳು ವೈಜ್ಞಾನಿಕವಾಗಿ ದಾಖಲಾಗಬೇಕು. ಇದರಿಂದಾಗಿ ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಸಂರಕ್ಷಣೆ ಮಾಡಬಹುದು’ ಎಂದು ಯದುಗಿರಿ ಯತಿರಾಜ ಮಠದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಹೇಳಿದರು.

ದಿ ಮಿಥಿಕ್ ಸೊಸೈಟಿ ಹಾಗೂ ಚಂದನ ಆರ್ಟ್ ಫೌಂಡೇಷನ್ ಜಂಟಿಯಾಗಿ ನಗರದಲ್ಲಿ ಆಯೋಜಿಸಿದ ‘ಶಿಲ್ಪವಿದ್ಯಾ ಸಮುಚ್ಛಯ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, ಮಾತನಾಡಿದರು.

‘ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿದ ರಾಷ್ಟ್ರ ಭಾರತ. ಈ ಪರಂಪರೆಯನ್ನು ಉಳಿಸಲು ನಾವು ಕಾರ್ಯೋನ್ಮುಖವಾಗಬೇಕು. ಆಗಮ, ಶಿಲ್ಪಶಾಶ್ತ್ರ ಮತ್ತು ಮೇಲುಕೋಟೆಯಲ್ಲಿರುವ ಮಠಕ್ಕೆ ಅವಿನಾಭಾವ ಸಂಬಂಧವಿದೆ. 12ನೇ ಶತಮಾನದಲ್ಲಿ ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ ರಾಮಾನುಜಾಚಾರ್ಯರು ಭಾರತದ ತುಂಬೆಲ್ಲಾ ಸಂಚರಿಸಿ, ದೇಶದಲ್ಲಿ ಸಾಂಸ್ಕೃತಿಕ ಸಂಚಲನ ಕ್ರಾಂತಿಯನ್ನು ಉಂಟುಮಾಡಿದರು. ಇದೇ ಮಹತ್ವದ ಕಾರ್ಯವನ್ನು ನಮ್ಮ ದೇಶದಲ್ಲಿ ಇತರ ಅನೇಕ ಸಂತರು ಸಹ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

ದಿ ಮಿಥಿಕ್ ಸೊಸೈಟಿ ಆಡಳಿತ ಮಂಡಳಿಯ ಸದಸ್ಯ ಎಂ.ಆರ್. ಪ್ರಸನ್ನಕುಮಾರ್, ‘ಭಾರತೀಯ ಸಾಂಸ್ಕೃತಿಕ ಪರಂಪರೆ ತನ್ನ ವಿಶಿಷ್ಟವಾದ ಸ್ಥಾನಮಾನಕ್ಕೆ ಹೆಸರಾಗಿದೆ. ನಮ್ಮಲ್ಲಿ ಕಂಡುಬರುವ ಶಿಲ್ಪಸೌಂದರ್ಯ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಆದರೆ, ಬ್ರಿಟಿಷ್ ಶಿಕ್ಷಣ ಪದ್ಧತಿಯಿಂದಾಗಿ ಕಲಾ ನಿರ್ಮಾಣ ಮತ್ತು ಕಲಾರಾಧನೆಯ ಕಟ್ಟುಪಾಡುಗಳು ಕಣ್ಮರೆಯಾಗುತ್ತಿವೆ. ಸ್ವಾತಂತ್ರ್ಯ ನಂತರವೂ ಈ ವಿಶಿಷ್ಟವಾದ ಸಂಸ್ಕೃತಿಯ ರಕ್ಷಣೆಗೆ ಸರ್ಕಾರಗಳು ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಇರುವುದು ಖೇದಕರ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.