
ಬೆಂಗಳೂರು: ನಗರ ಪಾಲಿಕೆಗಳ ಶಾಲಾ– ಕಾಲೇಜುಗಳಲ್ಲಿ ಉತ್ತಮ ಸೌಲಭ್ಯವಿದ್ದು, ವಿದ್ಯಾರ್ಥಿಗಳು ಇವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮಾಗಡಿ ರಸ್ತೆಯಲ್ಲಿ ನಿರ್ಮಿಸಿರುವ ನಗರ ಪಾಲಿಕೆ ಪ್ರಥಮ ದರ್ಜೆ ಕಾಲೇಜು ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಟ್ಟಡದಲ್ಲಿ ಎಲ್.ಕೆ.ಜಿ.ಯಿಂದ ಸ್ನಾತಕೋತ್ತರ ಪದವಿವರೆಗೆ ವರೆಗೆ ಶಿಕ್ಷಣ ಲಭ್ಯವಿದ್ದು ಮಕ್ಕಳು ಈ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಮಟ್ಟದ ಸಾಧನೆ ಮಾಡಬೇಕು ಎಂದರು.
ಬಿ.ಸಿ.ಎ ಮತ್ತು ಎಂ.ಸಿ.ಎ ಕೋರ್ಸ್‌ಗೆ ಬೇಡಿಕೆ ಸಲ್ಲಿಸಿದ್ದು, ಅಧಿಕಾರಿಗಳು ಅದಕ್ಕೆ ಅನುಮೋದನೆ ನೀಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.
ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ₹4 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ–1ರಲ್ಲಿ 6 ತರಗತಿ ಕೊಠಡಿಗಳು ಹಾಗೂ ಶೌಚಾಲಯ ಸೌಲಭ್ಯಗಳು ಲಭ್ಯವಿವೆ. ಕಟ್ಟಡ–2ರಲ್ಲಿ 6 ತರಗತಿ ಕೊಠಡಿಗಳು, ಶೌಚಾಲಯಗಳು ಹಾಗೂ ಸೆಲ್ಲರ್ (ಊಟದ ಕೊಠಡಿ) ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ನಗರ ಪಾಲಿಕೆ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಎಂಜಿನಿಯರ್ ಚಂದ್ರಶೇಖರ್, ಕಾರ್ಯಪಾಲಕ ಎಂಜಿನಿಯರ್ ಮಧುಸೂಧನ್, ಶಿಕ್ಷಣ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.