ಕರ್ನಾಟಕ ಲೇಖಕಿಯರ ಸಂಘದಿಂದ ‘ಅನುಪಮಾ’ ಪ್ರಶಸ್ತಿಯನ್ನು ವಿಜಯ ಸುಬ್ಬರಾಜ್, ವಸುಂಧರಾ ಭೂಪತಿ, ಸಬಿಹಾ ಭೂಮಿಗೌಡ, ಕೆ.ಆರ್. ಸಂಧ್ಯಾರೆಡ್ಡಿ ಮತ್ತು ಲತಾ ಗುತ್ತಿ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಲೇಖಕಿಯರ ಚರಿತ್ರೆಯನ್ನು ಪ್ರಕಟಿಸಬೇಕು. ಅದರ ಜೊತೆಗೆ ಎಲ್ಲ ಹಿರಿಯ ಲೇಖಕಿಯರ ಕೃತಿಗಳನ್ನು ಮರುಮುದ್ರಣ ಮಾಡಬೇಕು ಎಂದು ಲೇಖಕಿ ಹೇಮಲತಾ ಮಹಿಷಿ ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘ ಭಾನುವಾರ ಹಮ್ಮಿಕೊಂಡಿದ್ದ ಅನುಪಮಾ ಮತ್ತು ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಹಳಷ್ಟು ಲೇಖಕಿಯರ ಕೃತಿಗಳು ಈಗ ಸಿಗುತ್ತಿಲ್ಲ. ಅವರ ಕೃತಿಗಳನ್ನು ಮರುಮುದ್ರಣ ಮಾಡಬೇಕು ಎಂದು ಸಾಹಿತ್ಯ ಪರಿಷತ್ತಿಗೂ ಹೇಳಿದ್ದೆ. ಆದರೆ, ಅದು ಕಾರ್ಯಗತಗೊಂಡಿಲ್ಲ. ಲೇಖಕಿಯರ ಸಂಘ ಈ ನಿಟ್ಟಿನಲ್ಲಿ ಮುಂದಡಿ ಇಡಬೇಕು. ಸರ್ಕಾರವು ತಾನೇ ಕನ್ನಡ ಮತ್ತು ಸಂಸ್ಕೃತಿಯ ರಕ್ಷಕ ಎಂದು ಹೇಳಿಕೊಳ್ಳುವುದನ್ನು ಬದಿಗಿಟ್ಟು ಇಂಥ ಸಂಘಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ಲೇಖಕಿಯರು ಸ್ವತಂತ್ರ ಕೃತಿಗಳನ್ನು ರಚಿಸುವುದರ ಜೊತೆಗೆ ಬೇರೆ ಬೇರೆ ಭಾಷೆಗಳ ಕೃತಿಗಳನ್ನು ಅನುವಾದ ಮಾಡಲು ಮುಂದಾಗಬೇಕು. ಆಗ ಬರೆಯಲು ಹೊಸ ವಸ್ತು, ಹೊಸ ದೃಷ್ಟಿಕೋನ ದೊರೆಯುತ್ತದೆ ಎಂದರು.
ಸಂಸ್ಕತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಮಹಿಳೆಯರ ಸಾಹಿತ್ಯವನ್ನು ಅಡುಗೆಮನೆ ಸಾಹಿತ್ಯ ಎಂದು ಹಿಂದಿನ ಪುರುಷ ವಿಮರ್ಶಕರು ಬದಿಗಿಟ್ಟರು. ವಿಮರ್ಶಕರ ದೃಷ್ಟಿಕೋನದ ಸಮಸ್ಯೆ, ಸಂವೇದನೆಯಲ್ಲಿನ ತಪ್ಪಿನ ಪರಿಣಾಮ 80–90ರ ದಶಕದಲ್ಲಿ ಬಂಡಾಯ, ದಲಿತ ಬಂಡಾಯ ಸಾಹಿತಿಗಳು ಕೂಡ ಕೇರಳದ ಕಮಲಾದಾಸ್, ಕೋಲ್ಕತ್ತದ ಮಹಾಶ್ವೇತಾದೇವಿ, ಇತಿಹಾಸಕ್ಕೆ ಸಂಬಂಧಿಸಿದಂತೆ ರೊಮಿಲಾ ಥಾಫರ್ ಅವರ ಕೃತಿಗಳನ್ನು ಓದಿದರೇ ಹೊರತು ನಮ್ಮಲ್ಲೇ ಇದ್ದಾರಾ ಎಂದು ಹುಡುಕಲಿಲ್ಲ. ಇದರಿಂದಾಗಿ ಲೇಖಕಿಯರಿಗೆ ಸಿಗಬೇಕಾದ ಪ್ರೋತ್ಸಾಹ ಸಿಗಲಿಲ್ಲ’ ಎಂದು ಹೇಳಿದರು.
ಸರ್ಕಾರವು ಅನೇಕ ಖಾಸಗಿ ಸಂಸ್ಥೆಗಳಿಗೆ ಅನುದಾನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಅದೇ ರೀತಿಯಲ್ಲಿ ಸಾರ್ವಜನಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಲೇಖಕಿಯರ ಸಂಘಕ್ಕೂ ಇಡುಗಂಟು ನೀಡಬೇಕು. ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.
ಲೇಖಕಿಯರಾದ ವಿಜಯಾ ಸುಬ್ಬರಾಜ್, ವಸುಂಧರಾ ಭೂಪತಿ, ಸಬಿಹಾ ಭೂಮಿಗೌಡ, ಕೆ.ಆರ್. ಸಂಧ್ಯಾರೆಡ್ಡಿ, ಲತಾ ಗುತ್ತಿ ಅವರಿಗೆ 2020ರಿಂದ 2024ರವರೆಗಿನ ಐದು ವರ್ಷಗಳ 'ಅನುಪಮಾ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಅಲಕಾ ಕಟ್ಟೆಮನೆ, ಎಲ್.ವಿ. ಶಾಂತಕುಮಾರಿ, ಎಚ್.ಆರ್. ಸುಜಾತಾ, ಅನುಪಮಾ ಪ್ರಸಾದ್ ಅವರಿಗೆ 2020ರಿಂದ 2023ರವರೆಗಿನ ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಅಧ್ಯಕ್ಷತೆ ವಹಿಸಿದ್ದರು. ಲೇಖಕ ದೇವು ಪತ್ತಾರ್, ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ, ಖಜಾಂಚಿ ಮಂಜುಳಾ ಶಿವಾನಂದ, ಸಹಕಾರ್ಯದರ್ಶಿ ಸುಮಾ ಸತೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.