ADVERTISEMENT

ಸಿಎಂ, ಮೇಯರ್‌ಗೆ ಮನಕಲಕುವ ಪತ್ರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 5:44 IST
Last Updated 11 ಸೆಪ್ಟೆಂಬರ್ 2019, 5:44 IST
   

ಬಿಎಸ್‌ವೈ ಅಂಕಲ್‌, ಸಿದ್ದು ಅಂಕಲ್‌, ಎಚ್‌ಡಿಕೆ ಅಂಕಲ್‌ ನೀವು ರಾಜಕೀಯ ಮಾಡುವುದರಲ್ಲಿ ಬ್ಯುಸಿ ಇದ್ರಿ, ನಾನು ಹೊರಟು ನಿಂತೆ...

19 ಜುಲೈ 2019. ಸ್ಕೂಲ್‌ನಿಂದ ವಾಪಸ್‌ ಮನೆಗೆ ಬಂದ ನನಗೆ ಮತ್ತೊಮ್ಮೆ ಜ್ವರ ಬಂದಿತ್ತು. ಸ್ವಲ್ಪ ವಾಂತಿನೂ ಆಯ್ತು. ಅಪ್ಪ ಗಾಬರಿಯಾದರು. ಅಮ್ಮ ಹೇಳಿದ ಮೇಲೆ ಡಾಕ್ಟರ್‌ ಶಾಪ್‌ ಬೇಡ ಎಂದು ತೀರ್ಮಾನಿಸಿ ಹಾಸ್ಪಿಟಲ್ ಸೇರಿಸಿದ್ರು. ಅಲ್ಲಿ ಡಾಕ್ಟರ್‌ ಅಂಕಲ್‌ ಎಲ್ಲರೂ ಗಾಬರಿಯಿಂದ ಓಡಾಡುತ್ತಿದ್ದರು. ನನ್ನನ್ನು ಐಸಿಯುಗೆ ಶಿಫ್ಟ್ ಮಾಡಿದ್ರು. ಆಗ್ಲೇ ಹೇಳಿದ್ದು.. ನನಗೆ ಡೆಂಗಿ ಬಂದಿದೆ ಎಂದು. ಆಮೇಲೆ ಎರಡು ದಿನ ಅಸಾಧ್ಯ ಹಿಂಸೆ. ಹಂತಹಂತವಾಗಿ ಔಷಧಿಗಳನ್ನು ಕೊಟ್ಟು ಉಳಿಸೋಕೆ ಪ್ರಯತ್ನ ಪಟ್ಟರು. ದೇಹದ ಬೇರೆ ಬೇರೆ ಭಾಗಗಳಲ್ಲಿ ಚುಚ್ಚುಮದ್ದುಗಳನ್ನು ಚುಚ್ಚಿದ್ರು. ನೋವು ತಡೆಯಲಾಗದೇ ಅಳುತ್ತಿದ್ದೆ. ಎಲ್ಲರೂ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಹೊತ್ತಲ್ಲಿ ನಾನು ಹೊರಟುನಿಂತೆ. ನನ್ನದಲ್ಲದ ತಪ್ಪಿಗಾಗಿ..

ಈಗ ನಾನು ಎಲ್ಲರನ್ನೂ ಕಳೆದುಕೊಂಡು ಒಂಟಿಯಾಗಿ ಸ್ವರ್ಗದಲ್ಲಿದ್ದೇನೆ. ಈ ಪತ್ರ ಬರೆದಿರೋದು ಕಂಪ್ಲೇಂಟ್ ಮಾಡೋಕೆ ಅಲ್ಲ.

ADVERTISEMENT

ಅಂಕಲ್‌, ನನಗೆ ಈಗಲೂ ಚೆನ್ನಾಗಿ ನೆನಪಿದೆ. ನೀವೆಲ್ಲಾ ಅಧಿಕಾರ ಹಿಡಿಯಲು ಬ್ಯುಸಿಯಾಗಿದ್ದಿರಿ, ಅದೇ ಸಮಯದಲ್ಲಿ ನಾನು ಬಲಿಯಾದೆ. ಗಂಗಾಂಬಿಕೆ ಆಂಟಿ, ಎಚ್‌ಡಿಕೆ ಅಂಕಲ್‌ ನಿಮಗೆ ಗೊತ್ತಾ? ಡೆಂಗಿ ಬರೋದು ಸೊಳ್ಳೆ ಕಚ್ಚೋದ್ರಿಂದ ಅಂತೆ.

ಅಮ್ಮ ಯಾವಾಗಲೂ ಹೇಳ್ತಿದ್ಲು ನಾವು ನೀಟಾಗಿ ಇರಬೇಕು ಅಂತ. ಮನೇನ ಕ್ಲೀನ್ ಇಟ್ಕೊಬೇಕು ಅಂತನೂ ಹೇಳಿ ಕೊಟ್ಟಿದ್ಲು. ನಮ್ಮದು ಫೇಮಸ್ ಅಪಾರ್ಟ್‌ಮೆಂಟ್‌. ರವಿಶಂಕರ್ ಗುರೂಜಿ ಅವರ ಶಾಲೆಯಲ್ಲಿ ಓದುತ್ತಿದ್ದೆ. ಶಾಲೆ, ಮನೆ ಎರಡೂ ಕಡೆ ಶುಭ್ರವಾದ ವಾತಾವರಣ ಇತ್ತು. ಮತ್ಯಾಕೆ ನನಗೆ ಹೀಗಾಯ್ತು. ನಾನೆಲ್ಲಿ ಸೊಳ್ಳೆ ಕಚ್ಚಿಸಿಕೊಂಡೆ. ನಾನು ಮಾಡಿದ ತಪ್ಪಾದ್ರೂ ಏನು? ನಾನು ಜಗತ್ತೇ ಬಿಟ್ಟುಹೋಗುವಷ್ಟು ಕೆಟ್ಟವಳಾ? ನನಗಿನ್ನೂ ಹನ್ನೆರಡು ವರ್ಷ.

ನನ್ನ ಸ್ನೇಹಿತರು, ಅಪ್ಪ ಅಮ್ಮ ಹೀಗೆ ನನ್ನದೊಂದು ಜಗತ್ತೇ ಇತ್ತು. ಅವರನ್ನೆಲ್ಲಾ ಬಿಟ್ಟು ಹೋದೆ. ಮನೆ, ಸ್ಕೂಲ್ ಎಲ್ಲೂ ನಾವು ಸೊಳ್ಳೆ ಸಾಕಿಲ್ಲ. ಹೀಗಿದ್ರೂ ಬೆಂಗಳೂರಿನಲ್ಲಿ ಸೊಳ್ಳೆ ಬೆಳೆಯೋಕೆ ನೀವು ಯಾಕೆ ಬಿಟ್ರಿ?

ನೀವೆಲ್ಲಾ ಬ್ಯುಸಿಯಾಗಿ, ಸಿಟಿಯನ್ನು ಕ್ಲೀನ್‌ ಆಗಿ ಇಡೋದು ಮರೆತುಬಿಟ್ರಾ? ಬಿಎಸ್‌ವೈ ಅಂಕಲ್ ನೀವಾದ್ರೂ ಇದರ ಕಡೆ ಗಮನಕೊಡಿ. ಗಂಗಾಂಬಿಕೆ ಆಂಟಿ.. ಬೆಂಗಳೂರನ್ನು ದಯವಿಟ್ಟು ಸ್ವಚ್ಛವಾಗಿ ಇಡಿ.

ಕರ್ನಾಟಕದಲ್ಲಿ ಎಲ್ಲಾ ಕಡೆ ಹೀಗೇ ಆಗಿದೆ ಎಂದು ನಾನು ಓದಿದ್ದೇನೆ. ಮಳೆ ನಿಂತಕೂಡಲೇ ನಿಂತ ನೀರಿನಲ್ಲಿ ಸೊಳ್ಳೆ ಬೆಳೆಯುತ್ತದೆ. ಇದನ್ನು ತಡೆಯಲು ಸಾಧ್ಯವಿದೆ.

ಪ್ಲೀಸ್ ನನ್ನ ಫ್ರೆಂಡ್ಸ್‌ಗಳನ್ನು ಅವರ ಅಪ್ಪ, ಅಮ್ಮನಿಂದ ದೂರ ಮಾಡಬೇಡಿ. ನಾನಿದ್ದ ಆಸ್ಪತ್ರೆಯಲ್ಲಿ ನನ್ನ ಎದುರೇ ಇಬ್ಬರು ಪ್ರಾಣಬಿಟ್ಟರು. ಇದೆಲ್ಲಾ ಯಾಕೆ ವರದಿಯಾಗುತ್ತಿಲ್ಲ. ಸಾವುಗಳಾಗುತ್ತಿದ್ದರೂ ಗಮನವಹಿಸುತ್ತಿಲ್ಲ ಏಕೆ? ಎಲಿಸಾ ಎನ್ನುವ ರಕ್ತ ಪರೀಕ್ಷೆ ₹1500 ಕೊಡಬೇಕಂತೆ.. ಇಷ್ಟೆಲ್ಲಾ ಹಣಕೊಡಲು ಎಲ್ಲರಿಂದ ಸಾಧ್ಯವಿದೆಯೇ?

ಬಾರದ ಲೋಕದಿಂದ,ಅನನ್ಯಾ ರಾವ್‌

***

ಅನನ್ಯಾ ಸಾವು–ಬದುಕಿನ ಮಧ್ಯೆ ಸಂಘರ್ಷ ನಡೆಸುತ್ತಿದ್ದಳು.

ರಾಜ್ಯದಲ್ಲಿ ರಾಜಕೀಯ ಕಿತ್ತಾಟ ತಾರಕಕ್ಕೇರಿದ್ದ ಸಂದರ್ಭ. ಜನರಿಗೆ ತಮ್ಮ ಕಷ್ಟ ಹೇಳಿಕೊಳ್ಳಲು ಒಂದು ಸೂಕ್ತ ವ್ಯವಸ್ಥೆ ಇರಲಿಲ್ಲ. ಇದ್ದರೂ ಅದು ಕೆಲಸ ಮಾಡುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಗರದ 12 ವರ್ಷದ ಬಾಲಕಿ ಅನನ್ಯಾ ಸಾವು–ಬದುಕಿನ ಮಧ್ಯೆ ಸಂಘರ್ಷ ನಡೆಸುತ್ತಿದ್ದಳು.

ಡೆಂಗಿ ಈಗಾಗಲೇ ಹತ್ತಾರು ಮಂದಿಯನ್ನು ಕೊಡವಿ ಹಾಕಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಕಡಿವಾಣ ಮಾತ್ರ ಹಾಕಲಾಗಿಲ್ಲ. ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಅನನ್ಯಾ ಕೂಡ ಡೆಂಗಿಗೆ ಬಲಿಯಾಗಿದ್ದಾಳೆ. ಈಕೆಯಂತೆ ನಗರದಲ್ಲಿ ಡೆಂಗಿಗೆ ಬಲಿಯಾದ ಮಕ್ಕಳ ಸಂಖ್ಯೆ ಮಾತ್ರ ಸರ್ಕಾರದ ಪಟ್ಟಿಗೆ ಸೇರಿಲ್ಲ.. ಏಕೆ?

ಅನನ್ಯಾಳ ಹೆಸರಿನಲ್ಲಿ ಅವರ ದೊಡ್ಡಪ್ಪ ಬರೆದ ಈ ಪತ್ರದಲ್ಲಿನ ಪ್ರತಿ ಶಬ್ದವೂ ವ್ಯವಸ್ಥೆಯ ವಿರುದ್ಧ ಅವರಿಗಿರುವ ಅಸಹನೆಯನ್ನು ಎತ್ತಿ ತೋರಿಸುತ್ತದೆ. ‘ನನ್ನ ಸ್ನೇಹಿತರು, ಅಪ್ಪ, ಅಮ್ಮ ಎಲ್ಲರನ್ನೂ ನಾನು ಬಿಟ್ಟು ಹೊರಟೆ, ನನ್ನ ಸ್ನೇಹಿತರಿಗೂ ಇದೇ ಗತಿ ಬರುವುದು ಬೇಡ. ಸೊಳ್ಳೆಗಳನ್ನು ಬೆಳೆಯಲು ಬಿಡಬೇಡಿ’ ಎನ್ನುವ ಮಾತುಗಳು ಮನಸ್ಸನ್ನು ಹಿಂಡುತ್ತವೆ.

‘ನಾನಿದ್ದ ಆಸ್ಪತ್ರೆಯಲ್ಲಿ ನನ್ನ ಕಣ್ಣೆದುರೇ ಒಂದು ಮಗು ಡೆಂಗಿಯಿಂದಾಗಿ ಪ್ರಾಣ ಬಿಟ್ಟಿತು’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಆದರೆ ಆರೋಗ್ಯ ಇಲಾಖೆ ಪ್ರಕಾರ ಬೆಂಗಳೂರಿನಲ್ಲಿ ಇದುವರೆಗೂ ಡೆಂಗಿಗೆ ಒಂದೂ ಮಗು ಸಾವನ್ನಪ್ಪಿಲ್ಲ. ಹಾಗಾದರೆ ಇಲ್ಲಿ ಉದ್ಭವವಾಗುವ ಪ್ರಶ್ನೆ– ಮಕ್ಕಳ ಸಾವನ್ನು ಇಲಾಖೆ ನಿರ್ಲಕ್ಷಿಸುತ್ತಿದೆಯೇ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.