ADVERTISEMENT

ಅನುದಾನ ಇಲ್ಲದೆ ಪುಸ್ತಕ ಖರೀದಿ ಸಾಧ್ಯ: ಡಾ. ವಸುಂಧರಾ ಭೂಪತಿ

ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
ಕಾರ್ಯಕ್ರಮದಲ್ಲಿ ಹೊಸ ಯೋಜನೆಗಳ ಭಿತ್ತಿಪತ್ರವನ್ನು ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರದರ್ಶಿಸಿದರು. ಜಿ‌.ಎನ್‌. ಮೋಹನ್‌, ಅಭಿನವ‌ ರವಿಕುಮಾರ್‌, ಡಾ. ವಸುಂಧರಾ ಭೂಪತಿ ಹಾಗೂ ಸಿದ್ದನಗೌಡ ಪಾಟೀಲ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಹೊಸ ಯೋಜನೆಗಳ ಭಿತ್ತಿಪತ್ರವನ್ನು ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರದರ್ಶಿಸಿದರು. ಜಿ‌.ಎನ್‌. ಮೋಹನ್‌, ಅಭಿನವ‌ ರವಿಕುಮಾರ್‌, ಡಾ. ವಸುಂಧರಾ ಭೂಪತಿ ಹಾಗೂ ಸಿದ್ದನಗೌಡ ಪಾಟೀಲ ಉಪಸ್ಥಿತರಿದ್ದರು   

ಬೆಂಗಳೂರು: ‘ಗ್ರಂಥಾಲಯ ಕರವನ್ನು ನೇರವಾಗಿ ಗ್ರಂಥಾಲಯ‌ ಇಲಾಖೆಗೆ ಪಾವತಿಸಲು ಕ್ರಮವಹಿಸಿದರೆ, ಪ್ರತ್ಯೇಕ ಅನುದಾನದ ಅಗತ್ಯವಿಲ್ಲದೆ ಪುಸ್ತಕಗಳನ್ನು ಖರೀದಿಸಲು ಇಲಾಖೆಗೆ ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಸಂಘವು ನಗರದಲ್ಲಿ ಹಮ್ಮಿಕೊಂಡಿದ್ದ ನೂತನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

‘ದಿನಬಳಕೆಯ ಎಲ್ಲ ವಸ್ತುಗಳ‌ ಬೆಲೆ ದುಪ್ಪಟ್ಟಾಗಿದೆ. ಆದರೆ, ಸಾರ್ವಜನಿಕ‌ ಗ್ರಂಥಾಲಯ ಇಲಾಖೆಯಲ್ಲಿ ಪುಟವಾರು‌ ಬೆಲೆ‌ ನಿಗದಿ‌ಪಡಿಸಿ ಎಂಟು‌ ವರ್ಷಗಳಾಗಿವೆ. ಸರ್ಕಾರ ಪುಟವಾರು ದರ ಪರಿಷ್ಕರಣೆಯನ್ನೇ ಮಾಡಿಲ್ಲ. ಈಗಲಾದರೂ ಈ ನಿಟ್ಟಿನಲ್ಲಿ ಗಮನಹರಿಸಬೇಕು‌’ ಎಂದು ಆಗ್ರಹಿಸಿದರು.

ADVERTISEMENT

‘ರಾಜ್ಯದಾದ್ಯಂತ ಪುಸ್ತಕ ಪ್ರದರ್ಶನ ಹಮ್ಮಿಕೊಳ್ಳಲು ಸಂಘವು ಯೋಜನೆ ‌ರೂಪಿಸಿದೆ. ಪುಸ್ತಕದ ಬಗೆಗೆ ಚರ್ಚೆ–ಸಂವಾದ‌ ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಲೇಖಕರು‌, ಪ್ರಕಾಶಕರು‌ ಮತ್ತು ಮುದ್ರಕರ‌ ಜತೆ‌ ಮಾತುಕತೆ‌ ನಡೆಸಲು ಮಾತಿನ‌ ವಿನ್ಯಾಸ‌ ಕಾರ್ಯಕ್ರಮ, ಹೊಸ‌ ಪ್ರಕಾಶಕರಿಗೆ ಪುಸ್ತಕ‌ ನಿರ್ಮಾಣ ಮಾಡಲು ಕಮ್ಮಟ, ಶಾಲಾ‌–ಕಾಲೇಜುಗಳಲ್ಲಿ‌ ಪುಸ್ತಕಗಳ‌ ಬಗ್ಗೆ ಅರಿವು ಮೂಡಿಸಲು ‘ಗ್ರಂಥಾಲಯದ ಅಂಗಳ’ ಮುಂತಾದ‌ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ’ ಎಂದರು.

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಂಘದ ಹೊಸ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಸಂಘದ‌ ಪ್ರಧಾನ‌ ಕಾರ್ಯದರ್ಶಿ‌‌ ಅಭಿನವ‌ ರವಿಕುಮಾರ್‌, ಉಪಾಧ್ಯಕ್ಷ ಜಿ‌.ಎನ್‌. ಮೋಹನ್‌, ಪ್ರಗತಿ ಪರ ಚಿಂತಕ ಸಿದ್ದನಗೌಡ ಪಾಟೀಲ, ‘ವಿಜಯ ಕರ್ನಾಟಕ’ ಪುರವಣಿಗಳ ಸಂಪಾದಕಿ ವಿದ್ಯಾರಶ್ಮಿ ಪೆಲ್ಲತ್ತಡ್ಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.