ADVERTISEMENT

MG Road Metro ನಿಲ್ದಾಣದಲ್ಲಿ ದುರಸ್ತಿಯಾಗದ ಲಿಫ್ಟ್‌: ವೃದ್ಧರ, ಅಂಗವಿಕಲರ ಪರದಾಟ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 15:59 IST
Last Updated 7 ಡಿಸೆಂಬರ್ 2024, 15:59 IST
ನಮ್ಮ ಮೆಟ್ರೊ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಲಿಫ್ಟ್‌ ಬಳಸದಂತೆ ಬ್ಯಾರಿಕೇಡ್ ಮತ್ತು ಕಸದ ತೊಟ್ಟಿಯನ್ನು ಅಡ್ಡಲಾಗಿ ಇರಿಸಲಾಗಿದೆ
ನಮ್ಮ ಮೆಟ್ರೊ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಲಿಫ್ಟ್‌ ಬಳಸದಂತೆ ಬ್ಯಾರಿಕೇಡ್ ಮತ್ತು ಕಸದ ತೊಟ್ಟಿಯನ್ನು ಅಡ್ಡಲಾಗಿ ಇರಿಸಲಾಗಿದೆ   

ಬೆಂಗಳೂರು: ‘ನಮ್ಮ ಮೆಟ್ರೊ’ ಎಂ.ಜಿ. ರಸ್ತೆಯಲ್ಲಿ ಲಿಫ್ಟ್‌ ಕಾರ್ಯನಿರ್ವಹಿಸದೇ ಎರಡು ವಾರ ಕಳೆದರೂ ಸರಿಪಡಿಸಿಲ್ಲ. ಜೊತೆಗೆ ಆಗಾಗ ಎಸ್ಕಲೇಟರ್‌ ಕೂಡ ಕೈಕೊಡುತ್ತಿದೆ. ಇದರಿಂದಾಗಿ ಎರಡು ಮಹಡಿ ಮೇಲಿರುವ ಪ್ಲ್ಯಾಟ್‌ಫಾರ್ಮ್‌ಗೆ ಹೋಗಲು ವೃದ್ಧರು, ಅಂಗವಿಕಲರು ಪರದಾಡುತ್ತಿದ್ದಾರೆ.

ಲಿಫ್ಟ್‌ ಬಳಸದಂತೆ, ಬಾಗಿಲಿಗೆ ಅಡ್ಡಲಾಗಿ ಎರಡು ಬ್ಯಾರಿಕೇಡ್‌ಗಳನ್ನು ಇಡಲಾಗಿದೆ. ಅಷ್ಟು ಸಾಲದು ಎಂದು ಕಸದ ತೊಟ್ಟಿಯನ್ನೂ ಅಡ್ಡ ಇರಿಸಲಾಗಿದೆ.

‘ವೈಟ್‌ಫೀಲ್ಡ್‌ ಕಡೆಯಿಂದ ಚಲ್ಲಘಟ್ಟ ಕಡೆಗೆ ಪ್ರಯಾಣ ಬೆಳೆಸುವವರು ಎಂ.ಜಿ. ರಸ್ತೆಯಿಂದ ಒಳಗೆ ಬಂದು ಪ್ಲ್ಯಾಟ್‌ಫಾರ್ಮ್‌ಗೆ ತೆರಳಲು ಲಿಫ್ಟ್‌ ವ್ಯವಸ್ಥೆ ಇದೆ. ಆದರೆ, ಈ ಲಿಫ್ಟ್‌ ಆಗಾಗ ಕೆಟ್ಟು ನಿಲ್ಲುತ್ತಿತ್ತು. ಎಸ್ಕಲೇಟರ್‌ ಸರಿ ಇದ್ದಿದ್ದರಿಂದ ಆಗ ಜನರು ಎಸ್ಕಲೇಟರ್‌ ಬಳಸುತ್ತಿದ್ದರು. ಆದರೆ, ಇತ್ತೀಚೆಗೆ ಲಿಫ್ಟ್‌ ಕೆಲಸವೇ ಮಾಡುತ್ತಿಲ್ಲ. ಪಕ್ಕದಲ್ಲೇ ಇರುವ ಎಸ್ಕಲೇಟರ್‌ ಕೂಡ, ಈ ವಾರ ದಿನ ಬಿಟ್ಟು ದಿನ ಸರಿ ಕೆಟ್ಟು ನಿಲ್ಲುತ್ತಿತ್ತು’ ಎಂದು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.

ADVERTISEMENT

‘ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ವಿಪರೀತ ಜನದಟ್ಟಣೆ ಇತ್ತು. ಲಿಫ್ಟ್‌ ಮತ್ತು ಎಸ್ಕಲೇಟರ್‌ ಎರಡೂ ಸರಿ ಇಲ್ಲದ ಕಾರಣ ಫ್ಲಾಟ್‌ಫಾರ್ಮ್‌ಗೆ ತೆರಳಲು ಎಲ್ಲರೂ ಮೆಟ್ಟಿಲನ್ನೇ ಬಳಸಬೇಕಾಯಿತು. ಮಕ್ಕಳು, ಯುವಜನರಿಗೆ ಇದು ಸಮಸ್ಯೆಯಲ್ಲ. ಮಂಡಿನೋವು ಇರುವ ನನ್ನಂಥವರಿಗೆ ಕಷ್ಟ’ ಎಂದು ಹಿರಿಯ ನಾಗರಿಕರಾದ ಶ್ರೀನಿವಾಸ್‌ ಅಲವತ್ತುಕೊಂಡರು.

‘ನವೀಕರಣಕ್ಕಾಗಿ ಲಿಫ್ಟ್‌ ಅನ್ನು ನ.22ರಂದು ಸ್ಥಗಿತಗೊಳಿಸಲಾಗಿದೆ ಡಿ.11ರ ನಂತರ ಎಂದಿನಂತೆ ಕಾರ್ಯಾಚರಿಸಲಿದೆ. ಈ ಬಗ್ಗೆ ಲಿಫ್ಟ್‌ ಪಕ್ಕದಲ್ಲಿ ಮಾಹಿತಿ ಪತ್ರ ಅಂಟಿಸಿದ್ದೇವೆ’ ಎಂದು ಬಿಎಂಆರ್‌ಸಿಎಲ್ ಸಿಬ್ಬಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.