
ಪ್ರಜಾವಾಣಿ ವಾರ್ತೆ
ಬೆಂಗಳೂರು: ಲಿಂಗರಾಜಪುರ ಪ್ರದೇಶದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಕಾರಣ, ರೋಬೋಟಿಕ್ ತಂತ್ರಜ್ಞಾನ ಬಳಸಿ ಇದರ ಮೂಲವನ್ನು ನಿಖರವಾಗಿ ಮತ್ತು ತ್ವರಿತವಾಗಿ ಪತ್ತೆಹಚ್ಚಲು ಜಲಮಂಡಳಿ ಮುಂದಾಗಿದೆ.
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸಮಸ್ಯೆ ಇರುವ ಪ್ರದೇಶಗಳಲ್ಲಿ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.
ದುರಸ್ತಿ ಕಾರ್ಯದ ಸಮಯದಲ್ಲಿ ನಿವಾಸಿಗಳಿಗೆ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲು, ಜಲಮಂಡಳಿ ಈಗಾಗಲೇ ಸಂಚಾರಿ ಕಾವೇರಿ ಮೊಬೈಲ್ ಟ್ಯಾಂಕರ್‌ಗಳನ್ನು ನಿಯೋಜಿಸಿದೆ.
‘ಇಡೀ ಪ್ರದೇಶವನ್ನು ಅಗೆಯುವ ಬದಲು, ದೋಷವಿರುವ ಜಾಗ ಪತ್ತೆಹಚ್ಚಲು ಲಭ್ಯವಿರುವ ಎಲ್ಲ ತಾಂತ್ರಿಕ ಸಂಪನ್ಮೂಲ ಬಳಸುತ್ತಿದ್ದೇವೆ. ಸೋಮವಾರ ಸಂಜೆಯೊಳಗೆ ಮೂಲ ಪತ್ತೆಹಚ್ಚಿ, ಪೈಪ್‌ಲೈನ್ ಸರಿಪಡಿಸಿದ ನಂತರ ಶುದ್ಧ ನೀರು ಸರಬರಾಜು ಪೂರೈಸಲಾಗುವುದು’ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.