ADVERTISEMENT

ಅಭಿವೃದ್ಧಿ ನಿಗಮಕ್ಕೆ ವಿರೋಧವಿಲ್ಲ

ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು: ಲಿಂಗಾಯತ ಮಹಾಸಭಾ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:50 IST
Last Updated 22 ಜೂನ್ 2019, 19:50 IST
ಎಸ್.ಎಂ.ಜಾಮದಾರ
ಎಸ್.ಎಂ.ಜಾಮದಾರ   

ಬೆಂಗಳೂರು: ‘ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಈ ಸಮುದಾಯವನ್ನು ಇತರ ಹಿಂದುಳಿದ ಸಮುದಾಯದ (ಒಬಿಸಿ) ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂಬ ಬೇಡಿಕೆಗೆ ನಮ್ಮ ವಿರೋಧವಿಲ್ಲ. ಆದರೆ ಇದು ಲಿಂಗಾಯತ ಶಿರೋನಾಮೆಯಲ್ಲೇ ಇರಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರತಿಪಾದಿಸಿದೆ.

ನಗರದ ಬಸವ ಸಮಿತಿಯ ‘ಅರಿವಿನ ಮನೆ’ಯಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಹಾ
ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ.ಪಾಟೀಲ ಹಾಗೂ ರಾಜ್ಯದ ಪ್ರಮುಖ ವಿರಕ್ತ ಮಠಾಧೀಶರು ಮಾತನಾಡಿದರು.

‘ಲಿಂಗಾಯತ ಸಮುದಾಯದಲ್ಲಿ ಒಟ್ಟು 102 ಜಾತಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಈಗಾಗಲೇ 30 ಜಾತಿಗಳು ಒಬಿಸಿ ಪಟ್ಟಿಯಲ್ಲಿವೆ. ಒಬಿಸಿ ಪಟ್ಟಿಗೆ ಸೇರಿಸುವುದಾದರೆ ಉಳಿದ 72 ಜಾತಿಗಳನ್ನು ಸೇರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುವುದಾದರೆ ಲಿಂಗಾಯತ ಹೆಸರಿನಲ್ಲಿಯೇ ಕೊಡಬೇಕು’ ಎಂದು ಪ್ರತಿಪಾದಿಸಿದರು.

ADVERTISEMENT

ಖಂಡನೆ: ‘ಲಿಂಗಾಯತ ಧರ್ಮ ಮಾನ್ಯತೆಯ ಪ್ರಶ್ನೆ ಸದ್ಯದ ಪರಿಸ್ಥಿತಿಯಲ್ಲಿ ಅಪ್ರಸ್ತುತ ಮತ್ತು ಈ ಕುರಿತ ಹೋರಾಟ ಕೈಬಿಡಲಾಗಿದೆ ಎಂಬ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಸಮಾಜಘಾತುಕ ನಿಲುವು’ ಎಂದೂ ಜಾಗತಿಕ ಲಿಂಗಾಯತ ಮಹಾಸಭಾ ಬಲವಾಗಿ ಖಂಡಿಸಿದೆ.

‘ಶಿವಶಂಕರಪ್ಪನವರಿಗೆ ಆ ಮಾತನ್ನು ಹೇಳುವ ನೈತಿಕ ಹಕ್ಕು ಇಲ್ಲ. ಸಮಸ್ತ ಲಿಂಗಾಯತ ಸಮುದಾಯ ಯಾವುದೇ ರಾಜಕೀಯ ಪಕ್ಷದ ಸ್ವತ್ತಲ್ಲ’ ಎಂದು ಸಾರಿದೆ.

ಕೈ ಬಿಟ್ಟಿಲ್ಲ: ‘ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯ ಹೋರಾಟವನ್ನು ಕೈಬಿಟ್ಟಿಲ್ಲ’ ಎಂದೂ ಮುಖಂಡರು ಇದೇ ವೇಳೆ ಸ್ಪಷ್ಟಪಡಿಸಿದರು.

‘ಈ ದಿಸೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು. ಅಂತೆಯೇ ಕೇಂದ್ರದ ಅಲ್ಪಸಂಖ್ಯಾತ ನಿಗಮಕ್ಕೂ ಕಳಿಸಿ ಮಾನ್ಯತೆ ಪಡೆಯಲು ಪ್ರಯತ್ನಿಸಲಾಗುವುದು’ ಎಂದರು.

ಗದಗ ಡಂಬಳ ಮಠದ ಸಿದ್ದರಾಮ ಶ್ರೀ, ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದದೇವರು, ಪಂಚಮಸಾಲಿ ಪೀಠದ ಜಯಮೃತ್ಯುಂಜಯ, ಮೈಸೂರು ಹೊಸಮಠದ ಚಿದಾನಂದ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ, ಇಳಕಲ್‌ ಮಹಾಂತೇಶ್ವರ ಮಠದ ಗುರುಮಹಾಂತ, ಅಥಣಿಯ ಶಿವಬಸವ ಸ್ವಾಮೀಜಿಗಳು ಮತ್ತು ಕೂಡಲಸಂಗಮದ ಗಂಗಾಮಾತೆ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಜರಿದ್ದರು.

*
ಅಖಿಲ ಭಾರತ ವೀರಶೈವ ಮಹಾಸಭಾ ಸುಳ್ಳು ಹೇಳುವುದನ್ನು ಕೈಬಿಡಬೇಕು. ಸಮುದಾಯದ ಜನರಿಗೆ ಇಂತಹ ವಿಷಯಗಳಲ್ಲಿ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಬೇಕು.
-ಎಸ್‌.ಎಂ.ಜಾಮದಾರ, ಮಹಾಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.