ADVERTISEMENT

ಗೃಹಲಕ್ಷ್ಮಿ ನಿಲ್ಲಿಸಿದರೂ ಪರವಾಗಿಲ್ಲ, ಮದ್ಯಪಾನ ನಿಷೇಧಿಸಿ: ಮಹಿಳೆಯರ ಆಗ್ರಹ

‘ಬೆಂಗಳೂರು ಚಲೋ’ ದಲ್ಲಿ ಮಹಿಳೆಯರ ಒಕ್ಕೊರಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 16:05 IST
Last Updated 25 ನವೆಂಬರ್ 2025, 16:05 IST
ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತೆಯರು ಮದ್ಯ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತೆಯರು ಮದ್ಯ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ‘ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡುತ್ತಿರುವ ₹2 ಸಾವಿರ ನಿಲ್ಲಿಸಿದರೂ ಪರವಾಗಿಲ್ಲ, ಬಿಹಾರದ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯ ನಿಷೇಧ ಜಾರಿ ಮಾಡಬೇಕು’ ಎಂದು ಮದ್ಯ ನಿಷೇಧ ಆಂದೋಲನದಲ್ಲಿ ಭಾಗವಹಿಸಿದ್ದ ಮಹಿಳೆಯರು ಒತ್ತಾಯಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ‘ಮದ್ಯ ನಿಷೇಧ ಆಂದೋಲನʼ ಸಂಘಟಿಸಿದ್ದ ‘ಬೆಂಗಳೂರು ಚಲೋ’ದಲ್ಲಿ ಭಾಗವಹಿಸಿದ್ದ ರಾಜ್ಯದ ನಾನಾ ಭಾಗಗಳ ಆರು ಸಾವಿರಕ್ಕೂ ಅಧಿಕ ಮಹಿಳೆಯರು, 25ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ಒಕ್ಕೊರಲಿನಿಂದ ಈ ಆಗ್ರಹ ಮಾಡಿದರು.

ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ‘ಬಿಹಾರದಲ್ಲಿ ನಿತೀಶ್‌ಕುಮಾರ್ ಅವರು ಮದ್ಯ ನಿಷೇಧ ಮಾಡಿದ್ಧಾರೆ. ಆ ರಾಜ್ಯದಲ್ಲಿ ಈಗ ಶೇ 70ರಷ್ಟು ಮದ್ಯ ಮಾರಾಟ ನಿಯಂತ್ರಣದಲ್ಲಿದೆ. ಇದೇ ಮಾದರಿಯಲ್ಲಿ ಸಿದ್ದರಾಮಯ್ಯ ಅವರೂ ಕರ್ನಾಟಕದಲ್ಲಿ ಮದ್ಯ ನಿಯಂತ್ರಣಕ್ಕೆ ಕಾನೂನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಇದು ಹಲವು ವರ್ಷಗಳಿಂದ ನಡೆದಿರುವ ಹೋರಾಟ. ಅಧಿವೇಶನದಲ್ಲೂ ಈ ವಿಚಾರ ಪ್ರಸ್ತಾಪಿಸಿದ್ದೇನೆ. ಸರ್ಕಾರದ ಇತಿಮಿತಿ ಗೊತ್ತಿದ್ದರೂ ಜನರ ಹಿತದೃಷ್ಟಿಯಿಂದ ಇದು ಜಾರಿಯಾಗುವುದು ಒಳ್ಳೆಯದು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಪಾನ ನಿಷೇಧ ಜಾರಿಗೊಳಿಸಲು ಯೋಚಿಸಬೇಕು’ ಎಂದು ಪಾಟೀಲ ಆಗ್ರಹಿಸಿದರು.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಜನರು ಸರ್ಕಾರದಿಂದ ಸಿಗುವ ಲಾಭದ ಬದಲು ನೆಮ್ಮದಿಯ ಬದುಕು ಬಯಸುತ್ತಿದ್ದಾರೆ. ಯೋಜನೆಗಳನ್ನು ಜಾರಿ ಮಾಡುವ ನೆಪದಲ್ಲಿ ಸರ್ಕಾರಗಳು ಮದ್ಯ ಮಾರಾಟ ಹೆಚ್ಚಿಸುತ್ತಿವೆ. ಜನರ ಹಣ, ಆರೋಗ್ಯ, ನೆಮ್ಮದಿ ಹಾಳು ಮಾಡುತ್ತಿರುವ ಮದ್ಯವನ್ನು ದೇಶದಾದ್ಯಂತ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ಮಹಿಳಾ ಸಂಘಟನೆಯ ಜ್ಯೋತಿ ಮಾತನಾಡಿ, ‘ಬಿಹಾರದಲ್ಲಿ ನಿತೀಶ್‌ಕುಮಾರ್‌ ಅವರು ಮದ್ಯ ನಿಷೇಧ ಮಾಡಿದ್ದರಿಂದಲೇ ಮಹಿಳೆಯರು ಅವರಿಗೆ ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇಂತಹ ನಿರ್ಧಾರ ಮಾಡದೇ ಇದ್ದರೆ, ಮಹಿಳೆಯರು ಮತದಾನದ ವೇಳೆ ಯೋಚನೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ರೈತ ನಾಯಕ ಎಚ್‌.ಆರ್‌.ಬಸವರಾಜಪ್ಪ, ಮದ್ಯಪಾನ ನಿಷೇಧ ಹೋರಾಟದ ಸಂಘಟಕಿ ಸ್ವರ್ಣಭಟ್‌ ಸೇರಿದಂತೆ ಹಲವರು ಮಾತನಾಡಿದರು. 

ಸಂಯುಕ್ತ ಹೋರಾಟ ಸಮಿತಿ, ಲೈಂಗಿಕ ಅಲ್ಪಸಂಖ್ಯಾತ ಒಕ್ಕೂಟ, ಬೀದಿ ಶ್ರಮಿಕರ ಸಂಘ, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಸ್ಲಂ ಜನಾಂದೋಲನ, ಕರ್ನಾಟಕ ರಾಷ್ಟ್ರ ಸಮಿತಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿದವು.

ಎರಡು ಬೇಡಿಕೆ ಈಡೇರಿಕೆಗೆ ಆಗ್ರಹ

* ಮದ್ಯ ಮಾರಾಟಕ್ಕೆ ಪರವಾನಗಿ ಪಡೆಯಲು ಹರಿಯಾಣ ಮಹಾರಾಷ್ಟ್ರ ರಾಜಸ್ಥಾನ ರಾಜ್ಯಗಳಲ್ಲಿ ಗ್ರಾಮ ಸಭೆಗಳಿಗೆ ಪರಮಾಧಿಕಾರ ನೀಡಲಾಗಿದೆ. ಗ್ರಾಮ ಸಭೆಯಲ್ಲಿ ಶೇ 20ರಷ್ಟು ಒಪ್ಪಿಗೆ ನೀಡಿದರೆ ಮಾತ್ರ ಮದ್ಯದಂಗಡಿ ತೆರೆಯಲು ಪಂಚಾಯತ್‌ ರಾಜ್‌ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕದಲ್ಲೂ ಇಂತಹ ಕಾನೂನು 2016ರವರೆಗೆ ಇತ್ತು. ಆ ನಂತರ ತೆಗೆದು ಹಾಕಿದ್ದು ಅದನ್ನು ಮರು ಜಾರಿಗೊಳಿಸಬೇಕು

*  ಮನೆಗಳು ಕಿರಾಣಿ ಅಂಗಡಿ ಪಾನ್‌ ಶಾಪ್‌ ಗೂಡಂಗಡಿಗಳಲ್ಲಿ ಈಗಲೂ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇದನ್ನು ತಡೆಯಲು ಪ್ರತಿ ಹಳ್ಳಿಯಲ್ಲೂ ಜಾಗೃತಿ ಸಮಿತಿಗಳಿಗೆ ಅರೆನ್ಯಾಯಿಕ ಅಧಿಕಾರ ನೀಡಬೇಕು. ಪಂಚಾಯತ್‌ ರಾಜ್‌ ಕಾನೂನಿನಲ್ಲಿ ಹೆಚ್ಚುವರಿ ಸಮಿತಿ ರಚನೆಗೆ ಅವಕಾಶವಿದ್ದು ಅನುಷ್ಠಾನಗೊಳಿಸಬೇಕು.

ಮುಖ್ಯಮಂತ್ರಿ ಭರವಸೆ

ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಮಹಿಳೆಯರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮದ್ಯಪಾನ ನಿಷೇಧ ಆಂದೋಲನದ ಸದಸ್ಯರು ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು. ನಿಯೋಗದ ಜೊತೆ ಚರ್ಚಿಸಿದ ಸಿದ್ದರಾಮಯ್ಯ ‘ಹೋರಾಟಗಾರರ ಬೇಡಿಕೆಗಳನ್ನು ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.