
ಬೆಂಗಳೂರು: ವಾಹನ ಚಾಲನಾ ಕಲಿಕಾ ಪರವಾನಗಿ (ಎಲ್‌ಎಲ್‌ಆರ್) ಪಡೆಯಲು ಅರ್ಜಿ ಸಲ್ಲಿಸಿದವರು ಏಳು ದಿನಗಳ ಒಳಗೆ ಆನ್‌ಲೈನ್ ಮೂಲಕ ಕಲಿಕಾ ಪರೀಕ್ಷೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳುವ ನಿಯಮ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಎಲ್ಎಲ್‌ಆರ್‌ಗೆ ಅರ್ಜಿ ಹಾಕಿದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಎಂಬುದನ್ನು ಈ ಪರೀಕ್ಷೆ ಮೂಲಕ ಪತ್ತೆ ಹಚ್ಚಲಾಗುತ್ತದೆ. ಯಾವುದೇ ಸಮಸ್ಯೆ ಇಲ್ಲದವರಿಗೆ ವಾಹನ ಚಾಲನಾ ಕಲಿಕೆಗೆ ಪರವಾನಗಿ ಸಿಗಲಿದೆ.
ಎನ್‌ಐಸಿ ಅಭಿವೃದ್ಧಿ ಪಡಿಸಿರುವ ಕೇಂದ್ರೀಕೃತ ವೆಬ್ ಆಧಾರಿತ ಸಾರಥಿ ತಂತ್ರಾಂಶದ ಮೂಲಕ ಆಧಾರ್/ಮೊಬೈಲ್ ಒಟಿಪಿ ಬಳಸಿಕೊಂಡು ಅರ್ಜಿ ಸಲ್ಲಿಸಬೇಕು. ನಿಗದಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಬೇಕು. ಪರವಾನಗಿ ಪ್ರಾಧಿಕಾರದವರಿಂದ ಅರ್ಜಿ ಪರಿಶೀಲನೆ ನಡೆಸಿದ ಬಳಿಕ ಏಳು ದಿನಗಳ ಒಳಗೆ ಆನ್‌ಲೈನ್ ಮೂಲಕ ಪರೀಕ್ಷೆ ತೆಗೆದುಕೊಳ್ಳಬೇಕು. ಏಳು ದಿನಗಳ ಒಳಗೆ ಪರೀಕ್ಷೆ ತೆಗೆದುಕೊಳ್ಳದೇ ಇದ್ದರೆ ತಂತ್ರಾಂಶದಲ್ಲಿ ಅರ್ಜಿಯು ಸ್ವಯಂ ರದ್ದಾಗುತ್ತದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ತಿಳಿಸಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಡಿಸೆಂಬರ್ 31ರ ಒಳಗೆ ಕಲಿಕಾ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿ ಏಳು ದಿನಗಳ ಒಳಗೆ ಪರೀಕ್ಷೆ ತೆಗೆದುಕೊಳ್ಳುವ ನಿಯಮ 2026ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.