ADVERTISEMENT

ಸಕಾಲಕ್ಕೆ ಸಾಲ ಮರು ಪಾವತಿಸಿ: ಸಚಿವ ರಾಮಲಿಂಗಾರೆಡ್ಡಿ

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 75ನೇ ವರ್ಷದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 14:45 IST
Last Updated 23 ಆಗಸ್ಟ್ 2025, 14:45 IST
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ವತಿಯಿಂದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
ಪ್ರಜಾವಾಣಿ ಚಿತ್ರ.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ವತಿಯಿಂದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಪ್ರಜಾವಾಣಿ ಚಿತ್ರ.   

ಬೆಂಗಳೂರು: ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿಸದಿದ್ದರೆ ಸಹಕಾರಿ ಸಂಘಗಳು ಉಳಿಯುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಶನಿವಾರ ಹಮ್ಮಿಕೊಂಡಿದ್ದ 75ನೇ ವರ್ಷದ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಹಕಾರ ಸಂಘಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಣ ಮರುಪಾವತಿಯ ಬಗ್ಗೆಯೂ ಆಡಳಿತ ಮಂಡಳಿ ಕಟ್ಟುನಿಟ್ಟಿನ ವಸೂಲಿ ಕ್ರಮ ವಹಿಸಬೇಕು ಎಂದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಮಾತ್ರ ಮಾಧ್ಯಮ ಸಂಜೀವಿನಿ ಯೋಜನೆ ಸೌಲಭ್ಯ ಸಿಗುತ್ತಿದ್ದು, ಎಲ್ಲ ಅರ್ಹ ಪತ್ರಕರ್ತರಿಗೆ ಸಿಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಯೋಜನೆಯಲ್ಲಿನ ಕಠಿಣ ಷರತ್ತು ಸಡಿಲಿಸಿ, ಸರಳೀಕರಣ ಮಾಡುವ ಬಗ್ಗೆ ಮುಖ್ಯಮಂತ್ರಿ ಜತೆಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಮಾತನಾಡಿ, ಪತ್ರಕರ್ತರನ್ನು ಕಂಡರೆ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಅಸಡ್ಡೆ. ಕೆಲವು ಸಲ ಸಾಲ ಕೊಡುವುದೇ ಇಲ್ಲ. ದೇಶದಲ್ಲಿ ನೋಟು ನಿಷೇಧಿಸಿದ್ದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರನ್ನು ಕಾಪಾಡಿದ್ದೇ ಸಹಕಾರ ಬ್ಯಾಂಕ್‌ಗಳು. ರಾಜ್ಯದಲ್ಲಿ ಅಂದಾಜು 569 ಪತ್ರಕರ್ತರಿಗೆ ಪಿಂಚಣಿ ಸಿಗುತ್ತಿದೆ. ಆದರೆ, ಕೆಲ ಕಠಿಣ ನಿಯಮದಿಂದ ಪಿಂಚಣಿ ಪಡೆಯಲು ಬಹುತೇಕ ಪತ್ರಕರ್ತರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಿಯಮ ರಹಿತವಾಗಿ ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದರು.

ಬೇಡಿಕೆ: ‘ಸಮುದಾಯ ಮಾಧ್ಯಮ ಭವನ’ ನಿರ್ಮಾಣಕ್ಕೆ ರಿಯಾಯಿತಿ ದರದಲ್ಲಿ ಸಿ.ಎ ನಿವೇಶನ ನೀಡಬೇಕು. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ‘ಮಾಧ್ಯಮ ಗ್ರಾಮ’ ನಿರ್ಮಾಣಕ್ಕೆ 10 ಎಕರೆ ಭೂಮಿ ಮಂಜೂರು ಮಾಡಬೇಕು. ಪತ್ರಕರ್ತರ ಪಿಂಚಣಿ ಯೋಜನೆಯ ನಿಯಮ ಸರಳೀಕರಣಗೊಳಿಸಬೇಕು. ಸಂಘದ ಉತ್ತೇಜನಕ್ಕೆ ₹10 ಕೋಟಿ ಬಡ್ಡಿ ರಹಿತ ಸಾಲ ನೀಡುವಂತೆ ಸರ್ಕಾರಕ್ಕೆ ಸಂಘದ ವತಿಯಿಂದ ಮನವಿ ಮಾಡಲಾಯಿತು.

ಸಂಘದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಘದ ಏಳ್ಗೆಗೆ ಕೊಡುಗೆ ನೀಡಿದವರಿಗೆ ಸನ್ಮಾನ ಮತ್ತು ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಅಧ್ಯಕ್ಷ ರಮೇಶ್ ಎಂ.ಪಾಳ್ಯ, ಉಪಾಧ್ಯಕ್ಷ ದೊಡ್ಡಬೊಮ್ಮಯ್ಯ, ಖಜಾಂಜಿ ಬಿ.ಎನ್.ಮೋಹನ್‌ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.