ಕೇಬಲ್
ಬೆಂಗಳೂರು: ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗರಬಾವಿ ಉಪವಿದ್ಯುತ್ ಕೇಂದ್ರದ ಭೂಗತ (ಯುಜಿ) ಕೇಬಲ್ ಅಳವಡಿಕೆ ಕಾರ್ಯ ಸ್ಥಗಿತಗೊಂಡಿರುವ ಕಾರಣ ಇತರೆ ಉಪ ಕೇಂದ್ರಗಳಿಗೆ ಹೆಚ್ಚುವರಿ ವಿದ್ಯುತ್ ಲೈನ್‌ಗಳ ಸಂಪರ್ಕ ನೀಡಲಾಗಿದೆ. ಇದರ ಪರಿಣಾಮ ಒತ್ತಡ ಹೆಚ್ಚಾಗಿ ವಿದ್ಯುತ್ ಕಡಿತಗೊಂಡು, ಸುತ್ತಮುತ್ತಲಿನ ಕೈಗಾರಿಕೆಗಳಿಗೆ ಹಾನಿಯಾಗುತ್ತಿದೆ.
ನಾಗರಬಾವಿ ಪ್ರದೇಶ ವ್ಯಾಪ್ತಿಯ ‘ನಮ್ಮೂರು ತಿಂಡಿ' ಸ್ಥಳದಿಂದ ನಾಯಂಡಹಳ್ಳಿ ರಿಂಗ್ ರಸ್ತೆವರೆಗೆ (1.4 ಕಿ.ಮೀ.) 220 ಕೆ.ವಿ. ಸಾಮರ್ಥ್ಯದ ಕೇಬಲ್‌ಗಳನ್ನು ಅಳವಡಿಸಬೇಕಿದೆ. ಸ್ಥಳೀಯರ ವಿರೋಧದ ಕಾರಣ ಒಂದು ವರ್ಷದಿಂದ ಕೆಲಸ ಸ್ಥಗಿತಗೊಂಡಿದೆ. ಇದರಿಂದ ಕೈಗಾರಿಕೆಗಳಿಗೆ ಸಮಸ್ಯೆಯಾಗುತ್ತಿದೆ.
300 ಮನೆಗಳಿಗೆ ವಿದ್ಯುತ್ ಒದಗಿಸುವ ಸಾಮರ್ಥ್ಯ ಹೊಂದಿರುವ ಉಪಕೇಂದ್ರಗಳಿಗೆ 500-600 ಲೈನ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಅವುಗಳಿಗೆ ಒತ್ತಡ ತಡೆದುಕೊಳ್ಳಲು ಆಗುತ್ತಿಲ್ಲ. ವಿದ್ಯುತ್ ಪೂರೈಕೆ ಮೇಲಿನ ಒತ್ತಡ ಕಡಿಮೆ ಮಾಡಲು ಅಧಿಕಾರಿಗಳು ಒಂದು ಪ್ರದೇಶಕ್ಕೆ ವಿದ್ಯುತ್ ಕಡಿತಗೊಳಿಸಿ, ಮತ್ತೊಂದು ಕಡೆಗೆ ಪೂರೈಸುತ್ತಿದ್ದಾರೆ.
ಪೀಣ್ಯ, ಮಾಚೋಹಳ್ಳಿ, ಸೀಗೆಹಳ್ಳಿ, ಹೆಗ್ಗನಹಳ್ಳಿ, ಕಮ್ಮಗೊಂಡನಹಳ್ಳಿ, ತಾವರೆಕೆರೆ, ದಾಬಸ್ ಪೇಟೆ, ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶಗಳ ಸ್ಥಿತಿ ಇದೇ ರೀತಿ ಇದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಉದ್ಯಮಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹಲವು ಬಾರಿ ಮನವಿ ಮಾಡಿದೆ.
‘ಅಧಿಕಾರಿಗಳ ಈ ಕಾರ್ಯವೈಖರಿಯಿಂದ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರತೊಡಗಿದೆ. ನಿರ್ವಹಣೆ ಸಮಯದಲ್ಲಿ ವಿದ್ಯುತ್ ಕಡಿತಗೊಂಡರೆ ಕಚ್ಚಾವಸ್ತುಗಳು ಹಾಳಾಗುತ್ತವೆ. ಉತ್ಪಾದನೆಗೆ ಪೆಟ್ಟು ಬೀಳಲಿದೆ. ವಿದ್ಯುತ್ ಕೈ ಕೊಡುತ್ತಿರುವ ಕಾರಣ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರಗಳಲ್ಲಿ ತಾಂತ್ರಿಕ ದೋಷ ಉಂಟಾಗುತ್ತದೆ. ಅವುಗಳ ದುರಸ್ತಿಗೆ ಸಮಯ ವ್ಯರ್ಥವಾಗುವುದರ ಜತೆಗೆ ಹಣವೂ ಖರ್ಚಾಗುತ್ತದೆ’ ಎಂದು ಉದ್ಯಮಿಗಳು ಬೇಸರ ವ್ಯಕ್ತಪಡಿಸಿದರು.
‘ಹಗಲಿನಲ್ಲಿ ಮುನ್ಸೂಚನೆ ಇಲ್ಲದೇ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಸಮಸ್ಯೆಯನ್ನು ಯಾರಿಗೆ ಹೇಳಬೇಕು? ಕೋಟ್ಯಂತರ ರೂಪಾಯಿ ಸಾಲ ಮಾಡಿ ಯಂತ್ರಗಳನ್ನು ಅಳವಡಿಸಲಾಗಿದೆ. ಮಾಹಿತಿ ನೀಡದೆ ವಿದ್ಯುತ್ ಕಡಿತ ಮಾಡಿದರೆ ಯಂತ್ರಗಳಿಗೆ ಹಾನಿಯಾಗುತ್ತದೆ ’ಎಂದು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.