ADVERTISEMENT

ಲಾಕ್‌ಡೌನ್‌ ತೆರವು: ಬೆಂಗಳೂರಿಗೆ ಪ್ರತ್ಯೇಕ ಮಾದರಿ

ಬಿಬಿಎಂಪಿ ಮುಖ್ಯ ಆಯುಕ್ತ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 18:46 IST
Last Updated 8 ಜೂನ್ 2021, 18:46 IST
ಬೆಂಗಳೂರಿನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿರುವುದು, ಫ್ಲೇ ಓವರ್‌ ಕೆಳಭಾಗದ ನೆರಳಿನಲ್ಲಿ ವ್ಯಕ್ತಿಯೊಬ್ಬರು ನಿದ್ರಿಸುತ್ತಿರುವುದು–ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿರುವುದು, ಫ್ಲೇ ಓವರ್‌ ಕೆಳಭಾಗದ ನೆರಳಿನಲ್ಲಿ ವ್ಯಕ್ತಿಯೊಬ್ಬರು ನಿದ್ರಿಸುತ್ತಿರುವುದು–ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ ತೆರವುಗೊಳಿಸುವ ವೇಳೆ ಬೆಂಗಳೂರಿಗೆ ಪ್ರತ್ಯೇಕ ಯೋಜನೆ ರೂಪಿಸಬೇಕು ಎಂದು ಬಿಬಿಎಂಪಿಯು ಸರ್ಕಾರವನ್ನು ಒತ್ತಾಯಿಸಿದೆ.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ಲಾಕ್‌ಡೌನ್‌ ತೆರವಿನ ಸಂದರ್ಭದಲ್ಲಿ ಬೆಂಗಳೂರಿಗೆ ಬೇರೆಯೇ ಮಾದರಿ ಅನುಸರಿಸುವ ಅಗತ್ಯವಿದೆ. ಇಲ್ಲಿನ ಸಂಸ್ಕೃತಿ, ಜನರ ನಡವಳಿಕೆ ಆಧರಿಸಿಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ’ ಎಂದರು.

‘ಲಾಕ್‌ಡೌನ್‌ನಿಂದಾಗಿ ಬಹಳಷ್ಟು ಜನರಿಗೆ ಕೆಲಸ ಇಲ್ಲದಂತಾಗಿದೆ. ಲಾಕ್‌ಡೌನ್‌ ಜಾರಿ ಹಾಗೂ ತೆರವುಗೊಳಿಸುವ ತೀರ್ಮಾನವನ್ನು ಸರ್ಕಾರವೇ ತೆಗೆದುಕೊಳ್ಳುತ್ತದೆ. ಯಾವೆಲ್ಲ ಉದ್ದಿಮೆಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ತೆರವಿನ ವೇಳೆ ನಗರಕ್ಕೆ ಹಾಗೂ ರಾಜ್ಯದ ಇತರ ಪ್ರದೇಶಗಳಿಗೆ ಬೇರೆಯೇ ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ರಫ್ತು ಆಧರಿತ ಕೈಗಾರಿಕೆಗಳಿಗೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಮೊದಲ ಹಂತದಲ್ಲಿ, ವಾಣಿಜ್ಯ ಉದ್ಯಮಗಳಿಗೆ ಎರಡನೇ ಹಂತದಲ್ಲಿ, ಬಾರ್‌ ಮತ್ತು ರೆಸ್ಟೋರಂಟ್‌ಗಳ ಕಾರ್ಯಾಚರಣೆಗೆ ಮೂರನೇ ಹಂತದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ADVERTISEMENT

‘ಈ ತಿಂಗಳಲ್ಲಿ ನಗರದಲ್ಲಿ ಸೋಂಕು ಪತ್ತೆ ದರ ಬಹಳ ಕಡಿಮೆಯಾಗಿದೆ. ಸರ್ಕಾರವು ಸಕಾಲದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಂಡಿದ್ದು ಕೂಡಾ ಇದಕ್ಕೆ ಕಾರಣ. ವೈದ್ಯರು, ಶುಶ್ರೂಷಕಿಯರು ಸೇರಿದಂತೆ ಆರೋಗ್ಯ ಸೇವೆಯ ಸಿಬ್ಬಂದಿಗಳ ಎಲ್ಲರ ಪರಿಶ್ರಮದಿಂದಾಗಿ ಇದು ಸಾಧ್ಯವಾಗಿದೆ’ ಎಂದರು.

‘ಲಾಕ್‌ಡೌನ್‌ ತೆರವುಗೊಂಡ ಬಳಿಕ ಬೇರೆ ಬೇರೆ ಪ್ರದೇಶಗಳಿಂದ ಜನ ಇಲ್ಲಿಗೆ ಬರುತ್ತಾರೆ. ಆಗ ಮತ್ತೆ ಸೋಂಕು ಹರಡುವ ಅಪಾಯವಿದೆ. ಹಾಗಾಗಿ ಇನ್ನು ಮುಂದೆಯೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಕಿವಿಮಾತು ಹೇಳಿದರು.

ಚಿತ್ರರಂಗದವರಿಗೆ ಕೋವಿಡ್‌ ಲಸಿಕೆ

ಚಿತ್ರೋದ್ಯಮದ ಕಲಾವಿದರು, ಕಾರ್ಮಿಕರು ಹಗೂ ತಂತ್ರಜ್ಞರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 10 ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆ ನೀಡುವ ಈ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಗೌರವ್‌ ಗುಪ್ತ, ‘ಕಾರ್ಮಿಕರು ಇರುವ ಸ್ಥಳಕ್ಕೇ ತೆರಳಿ ಕೋವಿಡ್‌ ಲಸಿಕೆ ಹಾಕಲು ಸರ್ಕಾರ ಅವಕಾಶ ಕಲ್ಪಿಸಿದೆ. ಚಿತ್ರರಂಗದವರಿಗೆ ಲಸಿಕೆ ಹಾಕಿದ ರೀತಿಯಲ್ಲೇ ಬೆಸ್ಕಾಂ ಲೈನ್‌ಮ್ಯಾನ್‌ಗಳು, ಜಲಮಂಡಳಿಯ ವಾಲ್ವ್‌ಮ್ಯಾನ್‌ಗಳು, ಬಿಬಿಎಂಪಿಯ ಸ್ಮಶಾನಗಳ ಕಾರ್ಮಿಕರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪಾಲಿಕೆ ವತಿಯಿಂದ ವಿಶೇಷ ಲಸಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದೇವೆ. ಅವರು ಆಯಾ ಸಂಘದವರ ಜೊತೆ ಸಮಾಲೋಚನೆ ಮಾಡಿ ಲಸಿಕೆ ಶಿಬಿರಗಳ ರೂಪರೇಷೆ ಸಿದ್ಧಪಡಿಸುತ್ತಾರೆ’ ಎಂದು ತಿಳಿಸಿದರು.

‘ಜನರು ಕೋವಿಡ್‌ನಿಂದ ರಕ್ಷಣೆ ಪಡೆಯಲು ಲಸಿಕೆ ಹಾಕಿಸಿಕೊಳ್ಳುವುದು ತೀರಾ ಅಗತ್ಯ. ಇನ್ನು 30 ದಿನಗಳಲ್ಲಿ ಬಿಬಿಎಂಪಿಗೆ ಪೂರೈಕೆ ಆಗುವ ಲಸಿಕೆಗಳ ಪ್ರಮಾಣ ಹೆಚ್ಚಾಗಲಿದೆ. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.