ADVERTISEMENT

ಲಾಕ್‌ಡೌನ್‌ನಿಂದ ಕುಸಿದ ಈರುಳ್ಳಿ ದರ

ಸಗಟು ದರದಲ್ಲಿ ಕೆ.ಜಿಗೆ ₹6 ರಿಂದ ₹10ರವರೆಗೆ ಮಾರಾಟ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 21:56 IST
Last Updated 28 ಏಪ್ರಿಲ್ 2020, 21:56 IST
ಈರುಳ್ಳಿ
ಈರುಳ್ಳಿ   

ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಈರುಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವಾರದಲ್ಲಿ ಸಗಟು ದರ ಪ್ರತಿ ಕೆ.ಜಿ.ಗೆ ₹ 20ರಿಂದ ₹ 30ರಂತೆ ಮಾರಾಟವಾಗುತ್ತಿದ್ದ ಈರುಳ್ಳಿ ಇದೀಗ ಒಂದಂಕಿಗೆ ಇಳಿದಿದ್ದು, ಪ್ರತಿ ಕೆ.ಜಿ ಸಗಟು ದರ ₹ 6ರಿಂದ ₹ 10ರಂತೆ ಮಂಗಳವಾರ ಮಾರಾಟವಾಯಿತು.

ಲಾಕ್‍ಡೌನ್ ಹೇರಿದ ಮೇಲೆ ಏಪ್ರಿಲ್ ಮೊದಲ ವಾರದಲ್ಲಿ ಈರುಳ್ಳಿ ದರ ₹ 70ರ ಗಡಿ ದಾಟಿತ್ತು. ಲಾಕ್‍ಡೌನ್ ನಿಯಮಗಳನ್ನು ಸಡಿಲಗೊಳಿಸಿ, ಸರ್ಕಾರದ ನಿರ್ದೇಶನದಂತೆ ಹಾಪ್‌ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಮನೆಗಳಿಗೆ ತರಕಾರಿ, ಹಣ್ಣು ಪೂರೈಸಲಾಗುತ್ತಿದೆ. ಮೊದಲಿನಂತೆ ಮಾರುಕಟ್ಟೆ ಮೊರೆ ಹೋಗದೆ ರೈತರು ಬೆಳೆದ ತರಕಾರಿಗಳು ನೇರವಾಗಿ ಗ್ರಾಹಕರ ಕೈಸೇರುತ್ತಿದೆ.

ರೈತರ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಆವಕವಾಗಿವೆ. ಆದರೆ, ಶುಭ ಸಮಾರಂಭಗಳಿಗೆ ನಿರ್ಬಂಧ ಇರುವ ಕಾರಣ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದೆ. ಮನೆಯಿಂದ ಗ್ರಾಹಕರು ಹೊರ ಬಾರದ ಕಾರಣ ವ್ಯಾಪಾರಿಗಳು ಮನೆ ಬಾಗಿಲಿಗೆ ಮಾರುಕಟ್ಟೆ ಸೇವೆ ನೀಡುತ್ತಿದ್ದಾರೆ.

ADVERTISEMENT

ಅಗತ್ಯ ಪ್ರಮಾಣದಲ್ಲಿ ತರಕಾರಿಗಳು ಲಭ್ಯವಿದ್ದರೂ ಗ್ರಾಹಕರ ಖರೀದಿ ಪ್ರಮಾಣ ತಗ್ಗಿದೆ. ಹಾಪ್‍ಕಾಮ್ಸ್‌ನಲ್ಲಿ ಈರುಳ್ಳಿ ದರ ಪ್ರತಿ ಕೆ.ಜಿ.ಗೆ ₹ 24ರಷ್ಟಿದೆ. ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಕಡಿಮೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

'ಈರುಳ್ಳಿ ಸಗಟು ದರ ಕ್ವಿಂಟಲ್‍ಗೆ ₹ 600ರಿಂದ ₹ 1,000ರಂತೆ ಮಾರಾಟವಾಗುತ್ತಿದೆ. ಮೂರಂಕಿಯಲ್ಲಿದ್ದ ಈರುಳ್ಳಿ ದರ ಎರಡೇ ತಿಂಗಳಿನಲ್ಲಿ ಒಂದಂಕಿಗೆ ಕುಸಿದಿದೆ. ಪೂರೈಕೆ ಹೆಚ್ಚಾಗಿದ್ದು, ಬೇಡಿಕೆ ಕಡಿಮೆಯಾಗಿದೆ' ಎಂದು ಬೆಂಗಳೂರು ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಸಿ.ಉದಯ್ ಶಂಕರ್ ತಿಳಿಸಿದರು.

ಬೀನ್ಸ್ ದುಬಾರಿಯಾಗಿದ್ದು ಟೊಮೆಟೊ, ಎಲೆಕೋಸು, ಬೀಟ್‍ರೂಟ್, ಆಲೂಗಡ್ಡೆ ದರಗಳು ಕಡಿಮೆ ಇವೆ. ಮೆಂತ್ಯ ಸೊಪ್ಪು, ಪಾಲಕ್ ಸೊಪ್ಪುಗಳ ಬೆಲೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.