ADVERTISEMENT

ಲಾಕ್‌ಡೌನ್: ಗರ್ಭಿಣಿಯರ ತಪಾಸಣೆಗಾಗಿ ಮೊಬೈಲ್ ವೈದ್ಯಕೀಯ ಘಟಕ ಸ್ಥಾಪಿಸಿದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 1:38 IST
Last Updated 8 ಏಪ್ರಿಲ್ 2020, 1:38 IST
ಮೆಯೊ ಹಾಲ್ ಬಳಿ ಕಾರ್ಯವೆಸಗುತ್ತಿರುವ ವೈದ್ಯಕೀಯ ಘಟಕ   ಚಿತ್ರ: ಪುಷ್ಕರ್.ವಿ
ಮೆಯೊ ಹಾಲ್ ಬಳಿ ಕಾರ್ಯವೆಸಗುತ್ತಿರುವ ವೈದ್ಯಕೀಯ ಘಟಕ ಚಿತ್ರ: ಪುಷ್ಕರ್.ವಿ   

ಬೆಂಗಳೂರು: ಕೊರೊನಾವೈರಸ್ ಲಾಕ್‍ಡೌನ್ ಹೊತ್ತಲ್ಲಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿರುವವರುಗರ್ಭಿಣಿಯರು.ತಪಾಸಣೆಗಾಗಿ ವೈದ್ಯರ ಬಳಿ ಪದೇ ಪದೇ ಹೋಗಬೇಕು, ಫಾಲಿಕ್ ಆ್ಯಸಿಡ್ ಮಾತ್ರ ತೆಗೆದುಕೊಳ್ಳಬೇಕು, ಅಲ್ಟ್ರಾಸೌಂಡ್ ಸ್ಕ್ಯಾನ್ ಹೀಗೆ ಪ್ರತಿಯೊಂದಕ್ಕೂ ಹೊರಗೆ ಹೋಗಲೇಬೇಕಾಗುತ್ತದೆ.

19 ಹರೆಯದ ಗಾಯತ್ರಿ ಎಂಬ ಮಹಿಳೆ 3 ತಿಂಗಳ ಗರ್ಭಿಣಿ. ಈಕೆ ಘೋಶಾ ಆಸ್ಪತ್ರೆಯಲ್ಲಿ ತಪಾಸಣೆಗಾಗಿ ಹೆಸರು ನೋಂದಾಯಿಸಿದ್ದು ನಿರ್ದಿಷ್ಟ ಸಮಯಕ್ಕೆ ಆಸ್ಪತ್ರೆಗೆ ತಲುಪುವ ಬಗ್ಗೆ ಆಕೆಗೆ ಆತಂಕವಿತ್ತು.ಆದರೆ ಆ ಆತಂಕ ದೂರ ಮಾಡಿದ್ದು ಬಿಬಿಎಂಪಿ.

ಬಿಬಿಎಂಪಿ ಈಗ ಬೆಂಗಳೂರು ನಗರದಲ್ಲಿ 6 ಮೊಬೈಲ್ ವೈದ್ಯಕೀಯ ಘಟಕಗಳನ್ನು ಸ್ಥಾಪಿಸಿದೆ. ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ಈ ರೀತಿಯ ವೈದ್ಯಕೀಯ ಘಟಕಗಳನ್ನು ಸ್ಥಾಪಿಸಿದ್ದು, ಗರ್ಭಿಣಿ, ಹಾಲುಣಿಸುವ ಅಮ್ಮಂದಿರಿಗೆ ಈ ಘಟಕ ಅಗತ್ಯ ವೈದ್ಯಕೀಯ ಸೇವೆ ನೀಡುತ್ತಿದೆ.

ADVERTISEMENT

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಪಕ್ಕದಲ್ಲಿರುವ ಮೊಬೈಲ್ ವೈದ್ಯಕೀಯ ಘಟಕದಲ್ಲಿ ಗಾಯತ್ರಿ ಆರೋಗ್ಯ ತಪಾಸಣೆ ಮಾಡಿಕೊಂಡಿದ್ದಾರೆ. ನನಗೆ ಮಲ್ಟಿವಿಟಾಮಿನ್ ಮತ್ತು ಕ್ಯಾಲ್ಸಿಯಂ ಟ್ಯಾಬ್ಲೆಟ್‌ಗಳನ್ನು ಕೊಟ್ಟಿದ್ದಾರೆ. ಆರೋಗ್ಯ ಸರಿ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು 'ಪ್ರಜಾವಾಣಿ' ಜತೆ ಮಾತನಾಡಿದ ಗಾಯತ್ರಿ ಹೇಳಿದ್ದಾರೆ.

ಎನ್.ಆರ್ ಕಾಲನಿ ಮೆಟರ್ನಿಟಿ ಹೋಮ್‌ನಲ್ಲಿ ತಪಾಸಣೆಗೆ ಹೋಗುತ್ತಿದ್ದ 37 ವಾರ ನಾಲ್ಕು ದಿನದ ಗರ್ಭಿಣಿ ಆಗಿರುವ ವೆಂಕಟಮ್ಮ ಯೆಡಿಯೂರ್‌ನಲ್ಲಿರುವ ಮೊಬೈಲ್ ವೈದ್ಯಕೀಯ ಘಟಕದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.ನನಗೆ ಐರನ್ ಟ್ಯಾಬ್ಲೆಟ್ ನೀಡಿ, ಡ್ರಿಪ್ ಹಾಕಿದರು ಅಂತಾರೆ ಅವರು.ಬೊಮ್ಮನಹಳ್ಳಿಯ ಅಂಬೇಡ್ಕರ್ ನಗರದಲ್ಲಿರುವ 23ರ ಹರೆಯದ ರುಕ್ಮಿಣಿ ಸಿಂಗಸಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬಿಬಿಎಂಪಿಯ ಈ ಕಾರ್ಯಗಳ ಬಗ್ಗೆಮಾತನಾಡಿದ ಮುಖ್ಯ ವೈದ್ಯಾಧಿಕಾರಿ ಡಾ.ನಿರ್ಮಲಾ ಬಗ್ಗಿ, ನಾವು ಪ್ರತಿಯೊಂದು ತಂಡದಲ್ಲಿಯೂ ಗೈನಕಾಲಜಿಸ್ಟ್ ಮತ್ತು ಮಕ್ಕಳ ತಜ್ಞರನ್ನು ಕಳುಹಿಸುತ್ತೇವೆ. ಗುಡಿಸಲುಗಳಿರುವ ಪ್ರದೇಶವನ್ನು ನಾವು ಆಯ್ಕೆ ಮಾಡಿಕೊಂಡಿದ್ದು ಅಲ್ಲಿ ವೈದ್ಯಕೀಯ ಘಟಕಗಳನ್ನು ಸ್ಥಾಪಿಸಿದ್ದೇವೆ, ಇವತ್ತು ನಾವು ನಾಲ್ಕು ಗರ್ಭಿಣಿಯರನ್ನು ತಪಾಸಣೆಗೊಳಪಡಿಸಿದೆವು. ಎಲ್ಲರೂ ಆರೋಗ್ಯದಿಂದಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.