ADVERTISEMENT

ಬೆಂಗಳೂರು | ಜಲಮಂಡಳಿ, ಬೆಸ್ಕಾಂ ಕಚೇರಿಗಳಲ್ಲಿ ಲೋಕಾಯುಕ್ತ ಶೋಧ: ₹7.11 ಲಕ್ಷ ವಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 16:08 IST
Last Updated 20 ಡಿಸೆಂಬರ್ 2024, 16:08 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಲೋಕಾಯುಕ್ತದ ತನಿಖಾ ತಂಡಗಳು ಬೆಸ್ಕಾಂ ಮತ್ತು ಜಲಮಂಡಳಿ ಕಚೇರಿಗಳಲ್ಲಿ ಗುರುವಾರ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಗುತ್ತಿಗೆದಾರರು ಹಾಗೂ ಸಿಬ್ಬಂದಿ ಬಳಿ ಇದ್ದ ₹7.11 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ADVERTISEMENT

ದುರಾಡಳಿತ, ಕರ್ತವ್ಯಲೋಪ ಆರೋಪದಡಿ ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ವಿಚಾರಣೆ ಆರಂಭಿಸಿದ್ದಾರೆ. ಅದರ ಭಾಗವಾಗಿ ಲೋಕಾಯುಕ್ತದ ನ್ಯಾಯಾಂಗ ಮತ್ತು ಪೊಲೀಸ್ ವಿಭಾಗಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡಗಳು ಬೆಸ್ಕಾಂನ 25 ಹಾಗೂ ಜಲಮಂಡಳಿಯ 20 ಕಚೇರಿಗಳ ಮೇಲೆ ಗುರುವಾರ ದಾಳಿ ಮಾಡಿ, ಶೋಧ ನಡೆಸಿದ್ದವು.

‘ಇಂದಿರಾನಗರದ ಜಲಮಂಡಳಿ ಕಚೇರಿ ಒಂದರಲ್ಲೇ ₹4,89,480 ನಗದು ವಶಕ್ಕೆ ಪಡೆಯಲಾಗಿದೆ. ಮೂವರು ಗುತ್ತಿಗೆದಾರರ ಬಳಿ ಅನುಕ್ರಮವಾಗಿ ₹1.93 ಲಕ್ಷ, ₹50,000 ಮತ್ತು ₹27,900 ಪತ್ತೆಯಾಗಿತ್ತು. ಒಬ್ಬ ಕಚೇರಿ ಹಿರಿಯ ಸಹಾಯಕನ ಬಳಿ ₹1,86,750 ಮತ್ತು ಇನ್ನೊಬ್ಬ ಕಚೇರಿ ಕಿರಿಯ ಸಹಾಯಕನ ಬಳಿ ₹31,830 ಪತ್ತೆಯಾಗಿತ್ತು. ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ಕುಂದಲಹಳ್ಳಿಯ ಜಲಮಂಡಳಿ ಕಚೇರಿಯಲ್ಲಿ ₹1.30 ಲಕ್ಷ, ವಿಜಯನಗರ ಜಲಮಂಡಳಿ ಕಚೇರಿಯಲ್ಲಿ ₹66,800, ಕ್ರೆಸೆಂಟ್‌ ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ಒಬ್ಬ ಸಿಬ್ಬಂದಿ ಬಳಿ ₹12,000 ಮತ್ತು ಬಾಣಸವಾಡಿಯ ಬೆಸ್ಕಾಂ ಕಚೇರಿಯಲ್ಲಿ ಸಿಬ್ಬಂದಿ ಬಳಿ ₹13,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

‘ಜಲಮಂಡಳಿ ಮತ್ತು ಬೆಸ್ಕಾಂ ಕಚೇರಿಗಳಲ್ಲಿ ಗುರುವಾರ ತಡರಾತ್ರಿಯವರೆಗೂ ತಪಾಸಣೆ ನಡೆಸಲಾಗಿದೆ. ನಗದು ಕುರಿತು ಸರ್ಕಾರಿ ನೌಕರರು ಮತ್ತು ಗುತ್ತಿಗೆದಾರರ ವಿಚಾರಣೆ ನಡೆಸಲಾಯಿತು. ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಬಳಿಕ ನಗದನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ಹೇಳಿದೆ.

ಎರಡೂ ಸಂಸ್ಥೆಗಳ ಅನೇಕ ಅಧಿಕಾರಿಗಳು, ಸಿಬ್ಬಂದಿ ಯುಪಿಐ ಪಾವತಿ ಆ್ಯಪ್‌ಗಳ ಮೂಲಕವೂ ಹಣದ ವಹಿವಾಟು ನಡೆಸಿರುವ ಬಗ್ಗೆಯೂ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಈ ಕುರಿತೂ ತನಿಖೆ ನಡೆಸಲಾಗುತ್ತದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಲೋಪಗಳು ಪತ್ತೆ:

ಬನಶಂಕರಿ ಬೆಸ್ಕಾಂ ಕಚೇರಿಯ ಜನಸ್ನೇಹಿ ವಿದ್ಯುತ್‌ ಸೇವೆಗಳ ಕೇಂದ್ರದಲ್ಲಿ ಆನ್‌ಲೈನ್‌ ಮೂಲಕ ಸಲ್ಲಿಕೆಯಾಗಿರುವ 104 ಹಾಗೂ ‘ರಿಕ್ವಸ್ಟ್‌ ಎಸ್ಟಿಮೇಟ್‌’ನಲ್ಲಿ 122 ಅರ್ಜಿಗಳು ಬಾಕಿ ಇರುವುದು ಕಂಡುಬಂದಿದೆ.

ಬಹುತೇಕ ಕಚೇರಿಗಳಲ್ಲಿ ಹಾಜರಾತಿ ಕಡತ, ನಗದು ಘೋಷಣಾ ಕಡತ, ಅಧಿಕಾರಿಗಳು ಮತ್ತು ಸಿಬ್ಬಂದಿಯ ಚಲನ–ವಲನಗಳ ಕಡತ ನಿರ್ವಹಣೆ ಮಾಡದೇ ಕರ್ತವ್ಯಲೋಪ ಎಸಗಿರುವುದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.