ಬೆಂಗಳೂರು: ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಕರೆ ನೀಡಿರುವ ಲಾರಿ ಮುಷ್ಕರಕ್ಕೆ ಬೆಂಬಲ ನೀಡಿರುವವರು ಮುಷ್ಕರ ಮುಂದುವರಿಸಿದ್ದಾರೆ. ಮುಷ್ಕರಕ್ಕೆ ಬೆಂಬಲ ನೀಡದ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘದ ಅಡಿಯಲ್ಲಿರುವ ಲಾರಿಗಳು ಸಂಚರಿಸುತ್ತಿವೆ.
‘ಏಪ್ರಿಲ್ 14ರ ರಾತ್ರಿಯಿಂದ ಲಾರಿ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ. ಸಾರಿಗೆ ಸಚಿವರು, ಮುಖ್ಯಮಂತ್ರಿಯವರು ಎರಡು ಬಾರಿ ಮಾತುಕತೆ ನಡೆಸಿದ್ದರೂ ನಮ್ಮ ಬೇಡಿಕೆ ಈಡೇರಿಲ್ಲ. ಡೀಸೆಲ್ ದರ ಇಳಿಸುವವರೆಗೆ ಮುಷ್ಕರ ಕೈಬಿಡುವುದಿಲ್ಲ’ ಎಂದು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಸ್ಪಷ್ಟಪಡಿಸಿದ್ದಾರೆ.
‘ಮುಷ್ಕರಕ್ಕೆ ಕರ್ನಾಟಕ ಸರಕು ಸಾಗಾಣಿಕೆದಾರ ಸಂಘ, ಎಐಎಂಟಿಸಿ, ಎಸ್‌ಐಎಂಟಿಎ, ಬಿಸಿಟಿಎ, ಎಲ್‌ಪಿಜಿ ಟ್ಯಾಂಕರ್ಸ್, ಪೆಟ್ರೋಲ್ ಪಂಪ್ ಅಸೋಸಿಯೇಷನ್, ಏರ್‌ಪೋರ್ಟ್ ಟ್ಯಾಕ್ಸಿ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಹೆದ್ದಾರಿಗಳಲ್ಲಿ, ಟ್ರಕ್ ಟರ್ಮಿನಲ್‌ಗಳಲ್ಲಿ ಲಾರಿಗಳು ಸಾಲಾಗಿ ನಿಂತಿವೆ’ ಎಂದು ಅವರು ತಿಳಿಸಿದರು.
ಸರಾಗ ಸಂಚಾರ: ‘ನಾವು ಲಾರಿ ಮುಷ್ಕರ ಮಾಡಿಲ್ಲ. ಕೆಲವೇ ಲಾರಿಗಳ ಸಂಚಾರ ಸ್ಥಗಿತಗೊಂಡಿರಬಹುದು. ಬಹುತೇಕ ಲಾರಿಗಳು ಸಂಚರಿಸುತ್ತಿವೆ’ ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಅಸೋಸಿಯೇಶನ್ ಗೌರವಾಧ್ಯಕ್ಷ ಬಿ. ಚನ್ನಾರೆಡ್ಡಿ, ಅಧ್ಯಕ್ಷ ಸಿ. ನವೀನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣ ಪ್ರಸಾದ್ ತಿಳಿಸಿದ್ದಾರೆ.
‘ಜಿಲ್ಲೆ, ತಾಲ್ಲೂಕುಗಳಲ್ಲಿ ಎಂದಿನಂತೆ ಉದ್ಯಮಗಳು ನಡೆಯುತ್ತಿವೆ. ಸರಕು ಸಾಗಾಟದ ವಾಹನಗಳು ಸಂಚರಿಸುತ್ತಿವೆ. ಮಾರುಕಟ್ಟೆ, ಕೈಗಾರಿಕೆಗಳು ಯಾವುದೇ ತೊಂದರೆ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ. ನಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸರ್ಕಾರವೂ ಸ್ಪಂದಿಸುವ ಭರವಸೆ ನೀಡಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಸಂಘಟನೆಗಳು ಸರ್ಕಾರಕ್ಕೆ ಯಾವುದೇ ಸಮಯ ನೀಡದೇ ಮುಷ್ಕರಕ್ಕೆ ಕರೆ ನೀಡಿವೆ. ಲಾರಿ ಮಾಲೀಕರನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಅವರನ್ನು ಆರ್ಥಿಕ ದು:ಸ್ಥಿತಿಗೆ ತಳ್ಳುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.