ADVERTISEMENT

ಬೆಂಗಳೂರು: ಮಡಿವಾಳ ಕೆರೆಯಲ್ಲಿ ಕಳೆ ತೆಗೆಯಲು ₹1.28 ಕೋಟಿ ವೆಚ್ಚದ ಯಂತ್ರ ಬಳಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 15:37 IST
Last Updated 24 ಡಿಸೆಂಬರ್ 2025, 15:37 IST
ಮಡಿವಾಳ ಕೆರೆಯಲ್ಲಿ ಕಳೆ ತೆಗೆಯಲು ಬಳಸುತ್ತಿರುವ ಯಂತ್ರ
ಮಡಿವಾಳ ಕೆರೆಯಲ್ಲಿ ಕಳೆ ತೆಗೆಯಲು ಬಳಸುತ್ತಿರುವ ಯಂತ್ರ   

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮಡಿವಾಳ ಕೆರೆಯಲ್ಲಿ ಕಳೆ ತೆಗೆಯಲು ಆಧುನಿಕ ತಂತ್ರಜ್ಞಾನದ ಯಂತ್ರವನ್ನು ಬಳಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.

ಬಿಬಿಎಂಪಿ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಅನುಮೋದನೆಯಾಗಿದ್ದ ಯೋಜನೆಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಮಂಗಳವಾರ ಚಾಲನೆ ನೀಡಿದರು.

ಕೆರೆಗಳಲ್ಲಿ ಜಲಕಳೆ ತೆರವುಗೊಳಿಸುವ ಉದ್ದೇಶದಿಂದ ಹೊಸದಾಗಿ ಅತ್ಯಾಧುನಿಕ ಕಳೆ ತೆಗೆಯುವ ಯಂತ್ರವನ್ನು ಖರೀದಿಸಲಾಗಿದೆ. ಮಡಿವಾಳ ಕೆರೆಯಲ್ಲಿ ಕಳೆ ತೆಗೆಯುವ ಯಂತ್ರಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದು, ಅಗತ್ಯಕ್ಕೆ ಅನುಗುಣವಾಗಿ ಇತರೆ ಕೆರೆಗಳಲ್ಲಿಯೂ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಮಡಿವಾಳ ಕೆರೆಯನ್ನು ₹15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ವಾಯು ವಿಹಾರ ಮಾರ್ಗ ಅಭಿವೃದ್ಧಿ, ತೂಬುಗಳ ನಿರ್ಮಾಣ, ಮಕ್ಕಳ ಆಟದ ಪ್ರದೇಶ, ಬೀದಿ ದೀಪಗಳ ಅಳವಡಿಕೆ, ಶೌಚಾಲಯ, ಬ್ರಿಡ್ಜ್ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಕಾಮಗಾರಿಗಳಿಗೆ ವೇಗ ನೀಡುವ ಮೂಲಕ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಡಿವಾಳ ಕೆರೆಯಲ್ಲಿ ಈ ಹಿಂದೆ ಬೋಟಿಂಗ್ ವ್ಯವಸ್ಥೆ ಇತ್ತು. ಅದನ್ನು ಮತ್ತೆ ಪ್ರಾರಂಭಿಸುವುದು ಹಾಗೂ ಮಡಿವಾಳ ಕೆರೆಯನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದರು.

ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್‌. ರಮೇಶ್, ಮುಖ್ಯ ಎಂಜಿನಿಯರ್‌ ಬಸವರಾಜ್ ಕಬಾಡೆ ಉಪಸ್ಥಿತರಿದ್ದರು.

ಪ್ರತಿ ನಿತ್ಯ 10 ಲೀಟರ್‌ ಡೀಸೆಲ್‌

ರುದ್ರ ಆಕ್ವಾ ಮ್ಯಾಕ್ಸ್ ಎಂಬ ಅತ್ಯಾಧುನಿಕ ಕಳೆ ತೆಗೆಯುವ ಯಂತ್ರವನ್ನು ₹1.28 ಕೋಟಿ ವೆಚ್ಚದಲ್ಲಿ ಪಾಲಿಕೆಯು ಖರೀದಿಸಿದೆ. ಈ ಯಂತ್ರವು ಒಂದು ಬಾರಿ 5 ಟನ್‌ಗಳವರೆಗೆ ಕಳೆ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಲೈವ್ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಸುರಕ್ಷತಾ ಸೆನ್ಸರ್‌ಗಳು ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಂತ್ರ ಎಲ್ಲಿ ಮತ್ತು ಎಷ್ಟು ಸಮಯ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನಿಯಂತ್ರಣ ಕೊಠಡಿಯಿಂದ ಮೇಲ್ವಿಚಾರಣೆ ಮಾಡಬಹುದು ಎಂದು ಕಾರ್ಯಪಾಲಕ ಎಂಜಿನಿಯರ್‌ ನಿತ್ಯಾ ಮಾಹಿತಿ ನೀಡಿದರು. ಈ ಯಂತ್ರವನ್ನು ಆಟೋಕ್ರಸಿ ಮಿಷಿನರಿ ಸಂಸ್ಥೆಯ ವತಿಯಿಂದ ಮೂರು ವರ್ಷ ನಿರ್ವಹಿಸಲಾಗುತ್ತದೆ. ಈ ಅವಧಿಯಲ್ಲಿ ಯಂತ್ರದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೂ ಸಂಸ್ಥೆಯೇ ಸಂಪೂರ್ಣ ನಿರ್ವಹಣೆ ವಹಿಸಿಕೊಂಡಿದೆ. ಪ್ರತಿನಿತ್ಯ ಸುಮಾರು 10 ಲೀಟರ್‌ ಡೀಸೆಲ್‌ ಹಾಗೂ ಚಾಲಕನ ವೇತನವನ್ನು ಪಾಲಿಕೆ ನೀಡಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.