ADVERTISEMENT

ಶಿವರಾತ್ರಿ ಹಬ್ಬಕ್ಕೆ ಕಳೆ ತಂದ ದನಗಳ ಜಾತ್ರೆ

ತೋಟಗೆರೆ ಗ್ರಾಮದಲ್ಲಿ ಮೂರು ದಿನಗಳ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 22:02 IST
Last Updated 11 ಮಾರ್ಚ್ 2021, 22:02 IST
ದನಗಳ ಖರೀದಿಯಲ್ಲಿ ನಿರತರಾದ ಗ್ರಾಮಸ್ಥರು
ದನಗಳ ಖರೀದಿಯಲ್ಲಿ ನಿರತರಾದ ಗ್ರಾಮಸ್ಥರು   

ಹೆಸರಘಟ್ಟ: ಶೃಂಗಾರಗೊಂಡು ಹೊಳೆಯುತ್ತಿದ್ದ ಎತ್ತುಗಳು, ಕೊರಳಲ್ಲಿ ಘಂಟೆ ನಾದವನ್ನು ಹೊಮ್ಮಿಸುತ್ತಿದ್ದ ಹಸುಗಳು, ರಾಸುಗಳ ಆರೋಗ್ಯ ಹಾಗೂ ದಷ್ಠಪುಷ್ಠಿ ನೋಡಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಗ್ರಾಮಸ್ಥರು...

ಶಿವರಾತ್ರಿ ಹಬ್ಬದ ಪ್ರಯುಕ್ತ ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಹಿತಚಿಂತನಾ ಟ್ರಸ್ಟ್ ತೋಟಗೆರೆ ಗ್ರಾಮದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ದನಗಳ ಜಾತ್ರೆಯಲ್ಲಿ ಕಂಡು ಬಂದ ದೃಶ್ಯಗಳು.

ಜಾತ್ರೆಯಲ್ಲಿ ಹಳ್ಳಿಕಾರ್, ನಾಟಿ ಕ್ರಾಸ್, ಸಿಂಧಿ ಹಸುಗಳು ಭರ್ಜರಿ ಬೇಡಿಕೆ ಕಂಡವು. 200 ರಾಸುಗಳು ಜಾತ್ರೆಯಲ್ಲಿ ಮಾರಾಟಗೊಂಡವು. ಹಳ್ಳಿಕಾರ್ ತಳಿಯು ₹2 ಲಕ್ಷದವರೆಗೆ ಮಾರಾಟವಾಯಿತು. ಗ್ರಾಮಸ್ಥರು ದೇಸಿ ತಳಿಗಳ ಹಸುಗಳನ್ನು ಹೆಚ್ಚಾಗಿ ಖರೀದಿ ಮಾಡಿದರು. ₹50 ಸಾವಿರದಿಂದ ₹3 ಲಕ್ಷದವರೆಗೂ ವ್ಯಾಪಾರ ಮಾಡಲಾಯಿತು. ಸುತ್ತಮುತ್ತಲಿನ ಇಪ್ಪತ್ತು ಗ್ರಾಮಸ್ಥರು ತಮ್ಮ ರಾಸುಗಳನ್ನು ಮಾರಾಟ ಮಾಡಿದರು.

ADVERTISEMENT

’ನೆಲಮಂಗಲ ತಾಲ್ಲೂಕಿನ ಮಹಿಮಾಪುರ ಗ್ರಾಮದ ದನಗಳ ಜಾತ್ರೆಗೆ ನಾವು ಹೋಗುತ್ತಿದ್ದೇವು. ಎರಡು ವರ್ಷಗಳಿಂದ ಇಲ್ಲಿ ನಡೆಯುತ್ತಿರುವುದರಿಂದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಜಾತ್ರೆಯಲ್ಲಿ ದನಕರುಗಳಿಗೆ ಹುಲ್ಲು, ನೀರು ಮತ್ತು ಗ್ರಾಮಸ್ಥರಿಗೆ ತಿಂಡಿ, ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಉತ್ತಮ ಬೆಲೆ ಬಂದಿದ್ದು ನಿಜಕ್ಕೂ ಸಂತಸದ ವಿಷಯ' ಎಂದು ಗ್ರಾಮದ ನಿವಾಸಿ ಬಸವರಾಜು ಹರ್ಷ ವ್ಯಕ್ತಪಡಿಸಿದರು.

’2ನೇ ವರ್ಷದ ದನಗಳ ಜಾತ್ರೆ ಇದಾಗಿದ್ದು, ಗೊಲ್ಲಹಳ್ಳಿ, ಹೆಸರಘಟ್ಟ, ಹೊಸಹಳ್ಳಿ ಪಾಳ್ಯ, ಗೋಪಾಲಪುರ, ಕುಕ್ಕನಹಳ್ಳಿ, ಹುಸ್ಕೂರು ಗ್ರಾಮಗಳ ರೈತರು ಭಾಗವಹಿಸಿದ್ದಾರೆ. ಮಂಡ್ಯ, ಮೈಸೂರು, ಚನ್ನರಾಯನಪಟ್ಟಣಗಳಿಂದ ಬಂದ ರೈತರು ರಾಸುಗಳನ್ನು ಖರೀದಿ ಮಾಡಿದ್ದಾರೆ. ಈ ಭಾಗದ ರೈತರು ಹಸುಗಳ ಸಾಕಾಣಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದರಿಂದ ಇಲ್ಲಿಯ ಹಸುಗಳಿಗೆ ಉತ್ತಮ ಬೆಲೆ ನೀಡುತ್ತಾರೆ. ಮುಂದಿನ ವರ್ಷ ದನಗಳ ಜಾತ್ರೆಯನ್ನು ಐದು ದಿನ ನಡೆಸುವ ಆಲೋಚನೆ ಇದೆ‘ ಎಂದು ಹಿತಚಿಂತನಾ ಟ್ರಸ್ಟ್‌ ಅಧ್ಯಕ್ಷ ರಾಮಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.