ADVERTISEMENT

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ: ಇತ್ತ ಕಾಲೇಜೂ ಅಲ್ಲ, ಅತ್ತ ವಿ.ವಿ ಅಲ್ಲ

ಗೊಂದಲಮಯ ಸ್ಥಿತಿಯಲ್ಲಿ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ

ಎ.ಎಂ.ಸುರೇಶ
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
<div class="paragraphs"><p>ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ</p></div>

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ

   
ಒಂದು ವರ್ಷ 4 ತಿಂಗಳಿಂದ ಹಂಗಾಮಿ ಕುಲಪತಿ | ಕ್ಲಸ್ಟರ್‌ ವಿ.ವಿಯಲ್ಲೇ ಉಳಿಯಲು ಹೆಚ್ಚಿನ ಬೋಧಕರ ಒಲವು | ಅಡಕತ್ತರಿಯಲ್ಲಿ ಸಿಲುಕಿರುವ ಸಿಬ್ಬಂದಿ

ಬೆಂಗಳೂರು: ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದು ಏಳು ವರ್ಷಗಳಾಗಿವೆ. ಆದರೆ, ಇದುವರೆಗೂ ನಿಯಮಗಳ ರಚನೆ ಸಂಬಂಧ ಆದೇಶವಾಗಿಲ್ಲ. ಇದರಿಂದಾಗಿ ಇತ್ತ
ವಿಶ್ವವಿದ್ಯಾಲಯವೂ ಅಲ್ಲ, ಅತ್ತ ಕಾಲೇಜೂ ಅಲ್ಲದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ವಿಶ್ವವಿದ್ಯಾಲಯ ರೂಪಿಸಿರುವ ನಿಯಮಗಳಿಗೆ ಕಳೆದ ಸೆಪ್ಟೆಂಬರ್‌ ನಲ್ಲಿ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಆದರೆ, ಉನ್ನತ ಶಿಕ್ಷಣ ಇಲಾಖೆ ಇದುವರೆಗೂ ಈ ಕುರಿತು ಆದೇಶ ಹೊರಡಿಸಿಲ್ಲ. ಹೀಗಾಗಿ ಇಲ್ಲಿರುವ ಸಿಬ್ಬಂದಿ ತಾಂತ್ರಿಕವಾಗಿ ಈಗಲೂ ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲೇ ಇದ್ದಾರೆ. ಆದರೆ, ಕೆಲಸ ಮಾತ್ರ ವಿಶ್ವವಿದ್ಯಾಲಯದಲ್ಲಿ ಮುಂದುವರಿದಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

2019ರಲ್ಲಿ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದ್ದು, ಮಹಾರಾಣಿ ಕಾಲೇಜಿನಲ್ಲಿ ಇದ್ದ ಸಿಬ್ಬಂದಿಯನ್ನೇ ನಿಯೋಜನೆ ಮೂಲಕ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲಾಗಿದೆ. ಆದರೆ, ಸಂಬಳ ಮಾತ್ರ ಕಾಲೇಜು ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತಿದೆ. ವಿಶ್ವ ವಿದ್ಯಾಲಯದಲ್ಲೇ ಮುಂದುವರಿಯುವ ಹಾಗೂ ಹೊರಗೆ ಹೋಗುವ ಸಿಬ್ಬಂದಿಯ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

‘ವಿಶ್ವವಿದ್ಯಾಲಯದಲ್ಲಿ ಒಟ್ಟು 150 ಬೋಧಕ ಸಿಬ್ಬಂದಿ ಇದ್ದು, 90 ಮಂದಿ ವಿಶ್ವವಿದ್ಯಾಲಯದಲ್ಲೇ ಉಳಿಯುವುದಾಗಿ ಹಾಗೂ 60 ಮಂದಿ ಹೊರಗೆ ಹೋಗುವುದಾಗಿ ಲಿಖಿತವಾಗಿ ತಿಳಿಸಿದ್ದಾರೆ. 11 ಮಂದಿ ಬೋಧಕೇತರ ಸಿಬ್ಬಂದಿ ಇದ್ದು, ಅವರೆಲ್ಲರೂ ಹೊರಗೆ ಹೋಗುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕಡತವನ್ನು ಕಳೆದ ಅಕ್ಟೋಬರ್‌ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಅನುಮೋದನೆ ನೀಡಿಲ್ಲ’ ಎಂದು ಗೊತ್ತಾಗಿದೆ.

ನಿಯಮಗಳಿಗೆ ಮತ್ತು ವಿಶ್ವವಿದ್ಯಾಲಯದಲ್ಲೇ ಇರುವ ಮತ್ತು ಹೊರಗೆ ಹೋಗುವ ಸಿಬ್ಬಂದಿಗೆ ಸಂಬಂಧಿಸಿದ ಕಡತಗಳಿಗೆ ಒಪ್ಪಿಗೆ ಸಿಕ್ಕಿದರೆ ಕ್ಲಸ್ಟರ್‌ ವಿಶ್ವವಿದ್ಯಾಲಯ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಈ ಕೆಲಸ ಆಗದೇ ಇರುವುದರಿಂದ ಪಿಎಚ್‌.ಡಿ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಂಶೋಧನಾ ಕಾರ್ಯದಲ್ಲಿ ತೊಡಗಲು ಬಯಸುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

‘ಕ್ಲಸ್ಟರ್‌ ವಿಶ್ವವಿದ್ಯಾಲಯದಲ್ಲಿ 150 ಮಂದಿ ಕಾಯಂ ಬೋಧಕರಿದ್ದಾರೆ. ಬೇರೆ ಯಾವ ವಿಶ್ವವಿದ್ಯಾಲಯದಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಬೋಧಕ ಸಿಬ್ಬಂದಿ ಇಲ್ಲ. ಇಲ್ಲಿ ಇಷ್ಟೊಂದು ದೊಡ್ಡಸಂಖ್ಯೆಯಲ್ಲಿ ಬೋಧಕ ಸಿಬ್ಬಂದಿ ಇದ್ದರೂ, ನಿಯಮಾವಳಿಗಳು ಇಲ್ಲದ ಕಾರಣ ಪಿಎಚ್‌.ಡಿ ವಿದ್ಯಾರ್ಥಿ
ಗಳಿಗೆ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಆದಷ್ಟು ಬೇಗ ನಿಯಮಗಳಿಗೆ ಒಪ್ಪಿಗೆ ನೀಡಿದರೆ ಪಿಎಚ್‌.ಡಿ ಮಾಡಲು ಅನುಕೂಲವಾಗ ಲಿದೆ’ ಎಂದು ಸ್ನಾತಕೋತ್ತರ ವಿಭಾಗದ
ವಿದ್ಯಾರ್ಥಿನಿಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಡೇಟಾ ಸೈನ್ಸ್‌, ಕೃತಕ ಬುದ್ಧಿಮತ್ತೆಯ (ಎಐ) ಸ್ನಾತಕೋತ್ತರ ಕೋರ್ಸ್‌ ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಒಟ್ಟು 23 ಸ್ನಾತಕೋತ್ತರ ವಿಭಾಗಗಳಿವೆ. ಪದವಿ, ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ ಸುಮಾರು 4,500 ವಿದ್ಯಾ ರ್ಥಿನಿಯರು ಇದ್ದಾರೆ. ಡೇಟಾ ಸೈನ್ಸ್‌, ಕೃತಕ ಬುದ್ಧಿಮತ್ತೆ ಕೋರ್ಸ್‌ಗಳಿಗೆ ಭಾರಿ ಬೇಡಿಕೆ ಇದ್ದು, ಕಡಿಮೆ ವೆಚ್ಚದಲ್ಲಿ ವ್ಯಾಸಂಗ ಮಾಡಲು ಅವಕಾಶವಿದೆ.

ಬಹಳ ಕಷ್ಟಪಟ್ಟು ವಿಶ್ವವಿದ್ಯಾಲಯವನ್ನು ಒಂದು ಹಂತಕ್ಕೆ ತರಲಾಗಿದೆ. ಅದನ್ನು ಉಳಿಸಿಕೊಂಡು, ಮತ್ತಷ್ಟು ಬಲಪಡಿಸಬೇಕು. ಕಡಿಮೆ ಶುಲ್ಕದಲ್ಲಿ ಡೇಟಾ ಸೈನ್ಸ್‌, ಕೃತಕ ಬುದ್ಧಿಮತ್ತೆ ಕೋರ್ಸ್‌ಗೆ ಸೇರಲು ಇಲ್ಲಿ ಅವಕಾಶ ಇದೆ. ಬೇರೆ ಎಲ್ಲೂ ಇಂತಹ ವ್ಯವಸ್ಥೆ ಇಲ್ಲ
ಪ್ರೊ.ಎಲ್‌.ಗೋಮತಿ ದೇವಿ, ವಿಶ್ರಾಂತ ಕುಲಪತಿ

ಹೊಸ ಬ್ಲಾಕ್‌ ಇನ್ನೂ ಉದ್ಘಾಟನೆಯಾಗಿಲ್ಲ’

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ನೂತನ ಶೈಕ್ಷಣಿಕ ವಿಭಾಗವನ್ನು ಕಳೆದ ವರ್ಷ ನಿರ್ಮಿಸಲಾಗಿದೆ. ಆದರೆ, ಇದುವರೆಗೂ ಉದ್ಘಾಟನೆಯಾಗಿಲ್ಲ. ಇದರಿಂದಾಗಿ ಹೊಸ ಕಟ್ಟಡ ಬಳಕೆಯಾಗುತ್ತಿಲ್ಲ.

‘ಹೊಸ ಬ್ಲಾಕ್‌ ಉದ್ಘಾಟನೆಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ ಅವರು ಬರಲಿ ಎಂದು ಆರು ತಿಂಗಳಿಂದ ಕಾಯಲಾಗುತ್ತಿದೆ. ಆದರೆ, ಅವರು ದಿನಾಂಕ ನೀಡಿಲ್ಲ. ಹೊಸ ವಿಭಾಗವನ್ನು ವಿದ್ಯಾರ್ಥಿಗಳ ಉಪಯೋಗಕ್ಕೆ ಬಳಸಿಕೊಳ್ಳಿ, ಮುಂದೆ ಉದ್ಘಾಟನೆ ಮಾಡೋಣ ಎಂದು ಸಚಿವರು ಈಚೆಗೆ ತಿಳಿಸಿದ್ದಾರೆ’ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.