ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಬೆಂಗಳೂರು: ಮಹಾಶಿವರಾತ್ರಿ ನಿಮಿತ್ತ ಬುಧವಾರ ಶಿವಾಲಯಗಳಲ್ಲಿ ಶಿವಧ್ಯಾನ, ಶಿವಪೂಜೆ, ಶಿವಗಾನ, ಶಿವನಾಟ್ಯಗಳು ಸಮ್ಮಿಲನಗೊಂಡವು. ಭಕುತರ ಹೃದಯ ಮಂದಿರದಲ್ಲಿ ‘ಓಂ ನಮಃ ಶಿವಾಯ’ ಜಪ ಮೊಳಗಿತು.
ಬೆಳಿಗ್ಗೆಯೇ ಶಿವ ದೇವಾಲಯಗಳತ್ತ ಭಕ್ತರ ದಂಡು ಹರಿದುಬಂದಿತ್ತು. ಮನೆಯ ಮುಂದೆ, ದೇಗುಲಗಳ ಮುಂದೆ ಭಕ್ತಿಯ ರಂಗೋಲಿಯ ಚಿತ್ತಾರಗಳು ಅರಳಿದವು. ಭಕ್ತಿ ಮತ್ತು ಸಂಭ್ರಮ ಮೇಳೈಸಿದ ಜಾಗರಣೆಗಳು ನಡೆದವು.
ಜನರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಹಿರಿಯರು, ಕಿರಿಯರು ಶಿವಲಿಂಗಕ್ಕೆ ಕ್ಷೀರಾಭಿಷೇಕ ನೆರವೇರಿಸಿದರು. ಹೂವಿನ ಅಲಂಕಾರ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಮಹಾಲಕ್ಷ್ಮೀ ಹೋಮ, ವಿಶೇಷ ರುದ್ರ ಹೋಮ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆದವು.
ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದರು
ಗವಿಪುರದ ಗವಿಗಂಗಾಧರೇಶ್ವರ ದೇವಾಲಯ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯ, ಟೆಂಪಲ್ ಸ್ಟ್ರೀಟ್‌ನ ದಕ್ಷಿಣಮುಖ ನಂದಿ ತೀರ್ಥ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಜರಗನಹಳ್ಳಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ಕೋಣನಕುಂಟೆಯ ಚಂದ್ರಚೂಡೇಶ್ವರ ದೇವಸ್ಥಾನ, ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಚಾಮರಾಜಪೇಟೆಯ ಮಲೆ ಮಹದೇಶ್ವರ ದೇವಸ್ಥಾನ, ಹಳೆ ವಿಮಾನ ನಿಲ್ದಾಣ ರಸ್ತೆಯ ಮುರುಗೇಶ ಪಾಳ್ಯದ ಶಿವೋಹಂ ಶಿವ ದೇವಸ್ಥಾನ, ಕೋಟೆ ಜಲಕಂಟೇಶ್ವರ ದೇವಸ್ಥಾನ ಸೇರಿ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.
‘ದಕ್ಷ ಯಜ್ಞ’ ನಾಟಕ ಪ್ರದರ್ಶನ, ‘ಶಿವ ನಾದಾನುಭವ’ ಭಕ್ತಿ ಗೀತೆಗಳ ಗಾಯನ, ‘ವೀಣಾ ವಾದನ’, ‘ಶಿವಾಮೃತ’, ‘ಶಿವ ಸ್ಮರಣೆ’, ‘ಶಿವತಾಂಡವ’, ‘ಶಿವಾರ್ಪಣಂ’ ಭರತನಾಟ್ಯ’ ಪ್ರದರ್ಶನವನ್ನು ಕಾಡುಮಲ್ಲೇಶ್ವರ ಬಯಲು ರಂಗಮಂಟಪದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗದವರು ಹಮ್ಮಿಕೊಂಡಿದ್ದರು.
ನಗರದ ಹನುಮಂತ ನಗರದಲ್ಲಿರುವ ಶ್ರೀ ಶೇಷ ಮಹಾಬಲಮುರಿ ಗಣಪತಿ ದೇವಸ್ಥಾನದಲ್ಲಿ ಭಕ್ತರು ಶಿವಲಿಂಗಕ್ಕೆ ಬುಧವಾರ ಹಾಲೆರೆದರು
ಮಲ್ಲೇಶ್ವರದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ‘ಮೃತ್ತಿಕಾ ಶಿವಲಿಂಗ ದರ್ಶನ’, ‘ರುದ್ರಾಭಿಷೇಕ’ ನಡೆಯಿತು. ಚಿಕ್ಕಲಾಲ್‌ಬಾಗ್ ತುಳಸಿ ತೋಟ ಆಟದ ಮೈದಾನದಲ್ಲಿ ‘ಜಾಣ ಜಾಣೆಯರ ನಗೆ ಜಾಗರಣೆ, ಶಿವಪಾರ್ವತಿಯ ಅಂಬಾರಿ ಉತ್ಸವ’ಗಳು ಮನ ಸೆಳೆದವು. ಎಂ.ಎಸ್. ನರಸಿಂಹಮೂರ್ತಿ, ಕೃಷ್ಣೇಗೌಡ, ಮಿಮಿಕ್ರಿ ದಯಾನಂದದ್, ಮಿಮಿಕ್ರಿ ಗೋಪಿ ಸೇರಿದಂತೆ ಹಲವು ಹಾಸ್ಯ ಕಲಾವಿದರು ನಗೆಬುಗ್ಗೆ ಉಕ್ಕಿಸಿದರು.
ಜೆ.ಪಿ. ನಗರ ಮೂರನೇ ಹಂತದಲ್ಲಿ ಶಿವಬಾಲಯೋಗಿ ಮಹಾರಾಜ್ ಟ್ರಸ್ಟ್ ವತಿಯಿಂದ ಭಕ್ತಿ ಗೀತೆಗಳು, ಭಜನೆ, ಹರಿಕಥೆ, ಭರತನಾಟ್ಯ ಪ್ರದರ್ಶನ, ಕೊಳಲು ವಾದನ ಆಯೋಜಿಸಲಾಗಿತ್ತು. ವಿದ್ಯಾರಣ್ಯಪುರ ಎನ್‌ಟಿಐ ಮೈದಾನದಲ್ಲಿ ಕಥಾಶಾಸ್ತ್ರ ನಡೆಯಿತು. ಕೆಂಗೇರಿ ಉಪನಗರದ ಗಣೇಶ ದೇವಸ್ಥಾನದ ಆಟದ ಮೈದಾನದಲ್ಲಿ ಶಿವವೈಭವ ನಡೆಯಿತು. ಅಮರನಾಥ ಹಿಮದ ಜ್ಯೋತಿರ್ಲಿಂಗ ದರ್ಶನ, ಆದಿಯೋಗಿ ಶಿವನ ದರ್ಶನ, ಪ್ರಸಾದ ವಿನಿಯೋಗ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಂಕರಪುರ ಶೃಂಗೇರಿ ಶಂಕರ ಮಠದಲ್ಲಿ ರೋಟರಿ ಸೃಷ್ಟಿ ಶಿವರಾತ್ರಿ ಸಂಸ್ಕೃತಿ ಉತ್ಸವ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ‘ನಾದಸ್ವರ’ ಕೂಚಿಪುಡಿ ನೃತ್ಯ, ಭರತನಾಟ್ಯ, ಗಾಯನಗಳು ನಡೆದವು. ಜ್ಞಾನಭಾರತಿ ಜ್ಞಾನ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಗಣ ಹೋಮ, ಪಂಚಾಮೃತ ಅಭಿಷೇಕ, ಅಲಂಕಾರ, ತೀರ್ಥ ಪ್ರಸಾದ ವಿನಿಯೋಗಗಳಾದವು.
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಬುಧವಾರ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ
ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿರುವ ಬಿ.ಎಸ್. ಚಂದ್ರಶೇಖರ್ ಆಟದ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ವೀರಗಾಸೆ ಕುಣಿತ, ಸ್ಯಾಕ್ಸೋಫೋನ್, ಹಾಸ್ಯ ಕಾರ್ಯಕ್ರಮ, ಶಿವ ತಾಂಡವ ನೃತ್ಯ ವೈಭವ, ಸಂಗೀತ ಕಾರ್ಯಕ್ರಮ: ವಾಸುಕಿ ವೈಭವ ನಡೆದವು.
ಕೆಂಪೇಗೌಡನಗರ ಬಂಡೆ ಮಹಾಂಕಾಳಿ ದೇವಾಲಯದಲ್ಲಿ ‘ದಕ್ಷ ಯಜ್ಞ ಅಥವಾ ಬೃಗುಮುನಿಯ ಗರ್ವಭಂಗ’ ನಾಟಕ ಪ್ರದರ್ಶನ, ಅಬ್ಬಿಗೆರೆ ಸೋಮೇಶ್ವರಸ್ವಾಮಿ ದೇವಸ್ಥಾನ, ಸಹಸ್ರಾರು ದೀಪೋತ್ಸವ, ರಾತ್ರಿ ಜಾಗರಣೆಗಳಾದವು.
ಶಂಕರನಗರದಲ್ಲಿ ಶಿವರಾತ್ರಿ ಪ್ರಯುಕ್ತ ಶಿವದರ್ಶನಕ್ಕೆ ಬಂದಿರುವ ಭಕ್ತರು
ಮಲ್ಲೇಶ್ವರದಲ್ಲಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಫೌಂಡೇಶನ್ ವತಿಯಿಂದ ಶಿವರಾತ್ರಿ ಕಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಗಶೆಟ್ಟಿಹಳ್ಳಿಯಲ್ಲಿ ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ನೃತ್ಯ ಕಾರ್ಯಕ್ರಮ, ಕೋರಮಂಗಲ ಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮತ್ತು ಗಿರಿಜಾ ಕಲ್ಯಾಣೋತ್ಸವ ಪ್ರಯುಕ್ತ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ‘ಸನಾತನ ರಾಷ್ಟ್ರಾಂಜಲಿ’ ನೃತ್ಯ ಕಾರ್ಯಕ್ರಮ ನಡೆಯಿತು.
‘ಶಿವದರ್ಶನ’:
ಬೆಂಗಳೂರು ನಗರ್ತರಪೇಟೆಯಲ್ಲಿರುವ ನಗರೇಶ್ವರ ದೇವಾಲಯದಲ್ಲಿ ' ಶಿವದರ್ಶನ' ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು,
ಕನ್ನಡನಾಡಿನ ವೈವಿಧ್ಯಮಯ ಶಿವಲಿಂಗಗಳು, ಶಿವನ ಲೀಲಾಮೂರ್ತಿಗಳು, ಪರಿವಾರ ದೇವತೆಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ನಗರೇಶ್ವರ ದೇವಸ್ಥಾನದ, ಅಧ್ಯಕ್ಷ ವಿಜಯ್ ಕುಮಾರ್, ಕೆಂಗೇರಿ ಚಕ್ರಪಾಣಿ, ಕನ್ನಡಪರ ಹೋರಾಟಗಾರ ಗೋಮೂರ್ತಿ ಯಾದವ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಸಮಾಜ ಸೇವಕ ಪ್ರವೀಣ್ ಭಾಗವಹಿಸಿದ್ದರು.
ಹಲಸೂರು ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವ–ಗೌರಿಯನ್ನು ಅಲಂಕರಿಸಲಾಗಿತ್ತು.
‘ಕಾವ್ಯ ಶಿವರಾತ್ರಿ’
ಜನಸಂಸ್ಕೃತಿ ಪ್ರತಿಷ್ಠಾನ ಕಾವ್ಯ ಮಂಡಲ ಹಾಗೂ ಡಾ.ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಜಂಟಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಕಾವ್ಯ ಶಿವರಾತ್ರಿ ಆಯೋಜಿಸಿತ್ತು. ಅಹೋರಾತ್ರಿ ಮಂಟೇಸ್ವಾಮಿ ಮತ್ತು ಮಲೆಮಹಾದೇಶ್ವರ ಮಹಾಕಾವ್ಯ ಗಾಯನ ನಡೆಯಿತು.
ಬಂಗಾರದ ಗೋಪುರಗಳ ಮಾದರಿ
ಎಚ್‌ಎಎಲ್ ಮೂರನೇ ಹಂತದ ಶಿಶುಗೃಹ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನಿಂದ ಐದನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಬಂಗಾರದ ಗೋಪುರಗಳ ಮಾದರಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವನ ಲಿಂಗಕ್ಕೆ ಪ್ರತಿಷ್ಠಾಪನೆ ನೆರವೇರಿಸಿ ವಿಶೇಷ ಪೂಜೆ ಹೋಮ ಹವನ ರುದ್ರಾಭಿಷೇಕ ಹಾಗೂ ರುದ್ರಪಾರಾಯಣ ನೆರವೇರಿಸಲಾಯಿತು. ಪ್ರಯಾಗ್‌ರಾಜ್ ತ್ರಿವೇಣಿ ಸಂಗಮದ ಜಲ ಪ್ರೋಕ್ಷಣೆ ಮಾಡಲಾಯಿತು. ಸಿರಿಧಾನ್ಯದಿಂದ ತಯಾರಿಸಿದ ಪ್ರಸಾದವನ್ನು 24 ಗಂಟೆ ನಿರಂತರವಾಗಿ ವಿತರಿಸಲಾಯಿತು ಎಂದು ಟ್ರಸ್ಟಿ ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.