
ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಮಹೇಶ ಜೋಶಿ ಅವರು ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿರುವುದು ಹಾಸ್ಯಾಸ್ಪದ’ ಎಂದು ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಹೇಳಿದ್ದಾರೆ.
‘ಸಹಕಾರ ಇಲಾಖೆಯ ವಿಚಾರಣಾಧಿಕಾರಿ ವಿಚಾರಣೆ ನಡೆಸುತ್ತಿರುವ ಈ ಸಂದರ್ಭದಲ್ಲಿ, ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಬೇಕೆಂಬ ಆಗ್ರಹ ಸರಿಯಲ್ಲ. ವಿಚಾರಣಾಧಿಕಾರಿ ವಿಚಾರಣೆಯ ವರದಿಯನ್ನು ಹೈಕೋರ್ಟ್‌ಗೆ ಇನ್ನೂ ಸಲ್ಲಿಸಿಲ್ಲ. ನಾನು ಗೌರವ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಅನೇಕ ಕಾಮಗಾರಿಗಳಿಗೆ ಹಣಕಾಸು ಸಮಿತಿ ಅಥವಾ ಕಾರ್ಯಕಾರಿಣಿ ಸಭೆಯ ಒಪ್ಪಿಗೆ ಪಡೆಯದೆ, ವೈಯಕ್ತಿಕ ನಿರ್ಧಾರದಂತೆ ಕಾಮಗಾರಿಗಳಿಗೆ ಹಣ ಮುಂಜೂರು ಮಾಡಿದ್ದರು’ ಎಂದು ದೂರಿದ್ದಾರೆ.
‘ತಮ್ಮ ತಪ್ಪಿನಿಂದ ಕಸಾಪಕ್ಕೆ ಉಂಟಾಗಿರುವ ಸಂಕಷ್ಟವನ್ನು ಮಹೇಶ ಜೋಶಿ ಅವರು ಕಾರ್ಯಕಾರಿ ಮತ್ತು ಚುನಾಯಿತ ಜಿಲ್ಲಾಧ್ಯಕ್ಷರ ಹೆಗಲ ಮೇಲೆ ಹೊರಿಸಲು ಪದೇ ಪದೆ ಕುತಂತ್ರದ ಪ್ರಯತ್ನ ನಡೆಸುತ್ತಿದ್ದಾರೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.