ತೇಜಸ್ವಿನಿ ಅನಂತಕುಮಾರ್
ಯಲಹಂಕ: ಸಮಾಜದಲ್ಲಿ ಆದರ್ಶ ಮತ್ತು ಮೌಲ್ಯಗಳು ಅಳಿವಿನ ಅಂಚಿಗೆ ತಲುಪುತ್ತಿರುವ ಇಂತಹ ಕಾಲಘಟ್ಟದಲ್ಲಿ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಅರಿವು ಮೂಡಿಸಬೇಕಾದುದು ಅಗತ್ಯ ಎಂದು ಅದಮ್ಯ ಚೇತನ ಫೌಂಡೇಶನ್ ಸಹ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಅಭಿಪ್ರಾಯಪಟ್ಟರು.
‘ಮನೆಮನೆಗೂ ರಾಮಾಯಣ–ಪ್ರತಿ ಮಗುವಿಗೂ ರಾಮಾಯಣ’ ಶೀರ್ಷಿಕೆಯಡಿಯಲ್ಲಿ ಹೊನ್ನೇನಹಳ್ಳಿಯಲ್ಲಿರುವ ವಿಶ್ವವಿದ್ಯಾಪೀಠ ಶಾಲೆಯಲ್ಲಿ ಆಯೋಜಿಸಿದ್ದ ‘ರಾಮಾಯಣ ದರ್ಶನ–ಪ್ರವಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶ, ಸಂಸ್ಕೃತಿ ಮತ್ತು ಪ್ರಕೃತಿಯ ಬಗ್ಗೆ ರಾಮಾಯಣ ತಿಳಿಸುತ್ತದೆ. ಹಾಗಾಗಿ ಪಠ್ಯದಲ್ಲಿಯೂ ರಾಮಾಯಣ ಬೋಧಿಸಬೇಕು ಎಂದರು.
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಕಲಿಸಿಕೊಟ್ಟ ಪಾಠ ಅವರ ಜೀವನದಲ್ಲಿ ಪ್ರಭಾವ ಬೀರುತ್ತದೆ. ಹೀಗಾಗಿ ಪ್ರತಿದಿನ ಒಬ್ಬೊಬ್ಬ ಮೇಧಾವಿಗಳಿಂದ ರಾಮಾಯಣ ಪರಿಚಯಿಸಲಾಗುತ್ತಿದೆ ಎಂದು ಶಾಲೆಯ ನಿರ್ದೇಶಕಿ ಸುಶೀಲಾ ಸಂತೋಷ್ ತಿಳಿಸಿದರು.
ಚಾಣಕ್ಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ನವೀನ್ ಭಟ್ ಗಂಗೋತ್ರಿ, ರಾಮಾಯಣ ದರ್ಶನದ ಕುರಿತು ಪ್ರವಚನ ನೀಡಿದರು. ಪ್ರಾತ್ಯಕ್ಷಿಕೆಯ ಮೂಲಕ ರಾಮಾಯಣದ ಪಾತ್ರಗಳ ಪರಿಚಯ ಮಾಡಲಾಯಿತು. ನಂತರ ಮಕ್ಕಳೊಂದಿಗೆ ಸಂವಾದ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.