ADVERTISEMENT

ಕೈಮಗ್ಗ ಉಳಿವಿಗೆ ಯುವ ಸಮುದಾಯವನ್ನು ಜಾಗೃತಗೊಳಿಸಿ: ಪ್ರಸಾದ್ ಬಿದ್ದಪ್ಪ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:38 IST
Last Updated 21 ಜೂನ್ 2025, 15:38 IST
ವಿಚಾರ ಸಂಕಿರಣದಲ್ಲಿ‌ ನೈಸರ್ಗಿಕ ಬಣ್ಣಗಾರಿಕೆಯ ಪ್ರಾತ್ಯಕ್ಷಿಕೆಯನ್ನು ‘ಚರಕ’ದ ಬಣ್ಣಗಾರಿಕೆ ವಿಭಾಗದ ರುದ್ರಪ್ಪ, ಸುಮಿತ್ರ ನಡೆಸಿಕೊಟ್ಟರು
ವಿಚಾರ ಸಂಕಿರಣದಲ್ಲಿ‌ ನೈಸರ್ಗಿಕ ಬಣ್ಣಗಾರಿಕೆಯ ಪ್ರಾತ್ಯಕ್ಷಿಕೆಯನ್ನು ‘ಚರಕ’ದ ಬಣ್ಣಗಾರಿಕೆ ವಿಭಾಗದ ರುದ್ರಪ್ಪ, ಸುಮಿತ್ರ ನಡೆಸಿಕೊಟ್ಟರು   

ಬೆಂಗಳೂರು: ‘ಭವಿಷ್ಯದಲ್ಲಿ ಕೈಮಗ್ಗ ಕ್ಷೇತ್ರ ಉಳಿಯಲು ಯುವ ಸಮುದಾಯವನ್ನು ಸಂವೇದನಶೀಲರನ್ನಾಗಿಸುವುದೊಂದೇ ಸದ್ಯಕ್ಕಿರುವ ತುರ್ತು ಮಾರ್ಗ’ ಎಂದು ಫ್ಯಾಷನ್ ವಿನ್ಯಾಸಕಾರ ಪ್ರಸಾದ್ ಬಿದ್ದಪ್ಪ ಅಭಿಪ್ರಾಯಪಟ್ಟರು.

ಚರಕ ಮತ್ತು ದೇಸಿ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದ ಎರಡು ದಿನಗಳ ‘ಕೊಡು-ಕೊಳ್ಳುವವರ ಸಮಾವೇಶ’ದಲ್ಲಿ ಶನಿವಾರ ‘ಸುಸ್ಥಿರ ವಸ್ತ್ರ: ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ತಗ್ಗಿಸುವ ಸವಾಲು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕೈಮಗ್ಗ ಬಟ್ಟೆ ಧರಿಸುವುದು ಆರೋಗ್ಯದಾಯಕ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ಕುರಿತಂತೆ ಯುವ ಸಮುದಾಯವನ್ನು ಜಾಗೃತಗೊಳಿಸಬೇಕಾಗಿದೆ’ ಎಂದು ಸಲಹೆ ನೀಡಿದರು. 

ADVERTISEMENT

‘ಕೈಮಗ್ಗ ಅತ್ಯಂತ ಕಡಿಮೆ ಮೂಲಸೌಕರ್ಯ ಬೇಡುವ ಕ್ಷೇತ್ರ. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಈ ಕ್ಷೇತ್ರವನ್ನು ಗಮನಿಸಿದಾಗ ಮಾತ್ರ ಇದರ ಪುನರುಜ್ಜೀವನ ಸಾಧ್ಯ’ ಎಂದು ‘ಆದ್ಯಮ್’ ಸಂಸ್ಥೆಯ ಪ್ರಮುಖ ಸಲಹೆಗಾರ ಮನೀಶ್ ಸಕ್ಸೇನಾ ತಿಳಿಸಿದರು.

ಚರ್ಚೆಯಲ್ಲಿ‌ ಪಾಲ್ಗೊಂಡ ಟೈಟಾನ್ ಸಿಎಸ್ಆರ್‌ನ ಮುಖ್ಯಸ್ಥೆ ರಿತಿಕಾ ಗಾಂಧಿ, ‘ಕೈಮಗ್ಗ ಕ್ಷೇತ್ರವನ್ನು ಕೈಗಾರಿಕೆ ರೀತಿಯಲ್ಲಿ ಕಾಣಬಾರದು. ಸರ್ಕಾರ ತಜ್ಞರ ಸಲಹೆ ಮೇರೆಗೆ ಮಾರುಕಟ್ಟೆ ಒದಗಿಸಿ ಈ ಕ್ಷೇತ್ರವನ್ನು ರಕ್ಷಿಸಬೇಕು’ ಎಂದು ಸಲಹೆ ನೀಡಿದರು.

ಸುಸ್ಥಿರ ಅಭಿವೃದ್ಧಿ ಪ್ರತಿಪಾದಕಿ ಭಾರ್ಗವಿ ರಾವ್ ಸಂವಾದ ನಿರ್ವಹಿಸಿದರು. ವೀಣಾ ಹೆಗಡೆ, ಗೋಪಿ, ಅಮೃತಾ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.