
ಬೆಂಗಳೂರು: ಬನಶಂಕರಿಯ ಇಟ್ಟುಮಡು ಬಳಿ ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದ ವ್ಯಕ್ತಿಗೆ ಮಾರ್ಗಮಧ್ಯೆಯೇ ಹೃದಯಾಘಾತವಾಗಿ ಸ್ಥಳದಲ್ಲೇ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ.
ಇಟ್ಟುಮಡುವಿನ ವೆಂಕಟರಮಣನ್ (34) ಮೃತಪಟ್ಟವರು.
ವೆಂಕಟರಮಣನ್ ಅವರ ಪತ್ನಿ ಸಹಾಯಕ್ಕಾಗಿ ಸಿಕ್ಕ ಸಿಕ್ಕ ವಾಹನಗಳನ್ನು ಅಡ್ಡ ಹಾಕಿದ್ದರು. ಆದರೆ, ಯಾರೂ ವಾಹನ ನಿಲುಗಡೆ ಮಾಡಿ ನೆರವಿಗೆ ಬರಲಿಲ್ಲ ಎಂಬ ಆರೋಪವಿದೆ.
ಮಂಗಳವಾರ ಮುಂಜಾನೆ ವೆಂಕಟರಮಣನ್ ಅವರಿಗೆ →ಎದೆನೋವು→ ಕಾಣಿಸಿಕೊಂಡಿತ್ತು. ಆತಂಕಗೊಂಡಿದ್ದ ಅವರ ಪತ್ನಿ ರೂಪಾ ಅವರು ಆಸ್ಪತ್ರೆಗೆ ಹೋಗುವುದು ಸೂಕ್ತವೆಂದು ಹೇಳಿದ್ದರು. ಪತ್ನಿಯೊಂದಿಗೆ ದ್ವಿಚಕ್ರ ವಾಹನದಲ್ಲೇ ಕತ್ರಿಗುಪ್ಪೆ ಜನತಾ ಬಜಾರ್ ಸಮೀಪದ ಆಸ್ಪತ್ರೆಗೆ ತೆರಳಿದ್ದರು. ಮನೆಯಿಂದ ಸ್ವಲ್ಪ ದೂರು ಕ್ರಮಿಸಿದಾಗಲೇ ವೆಂಕಟರಮಣನ್ ಅವರಿಗೆ ಲಘು ಹೃದಯಾಘಾತವಾಗಿತ್ತು.
ಆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣಕ್ಕೆ ಬೇರೊಂದು ಆಸ್ಪತ್ರೆಗೆ ದಂಪತಿ ಹೊರಟಿದ್ದರು. ಅಲ್ಲಿಯೂ ಆಂಬುಲೆನ್ಸ್ ಸಿಗದ ಕಾರಣಕ್ಕೆ ಬೈಕ್‌ನಲ್ಲೇ ಆಸ್ಪತ್ರೆಗೆ ತೆರಳುತ್ತಿದ್ದರು. ಕದಿರೇನಹಳ್ಳಿ ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಮತ್ತೆ ತೀವ್ರ ಹೃದಯಾಘಾತವಾದ ಕಾರಣ, ವೆಂಕಟ ರಮಣನ್ ರಸ್ತೆ ಮಧ್ಯೆ ಕುಸಿದು ಬಿದ್ದಿದ್ದರು. ನೋವಿನಿಂದ ಒದ್ದಾಡುತ್ತಿದ್ದರೂ, ಸುತ್ತಮುತ್ತಲಿದ್ದ ಜನರು ನೆರವಿಗೆ ಬರಲಿಲ್ಲ ಎನ್ನಲಾಗಿದೆ.
ಪತ್ನಿ ರೂಪಾ ಅವರು ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರಿಗೆ ಕೈ ಮುಗಿದು ಬೇಡಿದರೂ ಸಹಾಯಕ್ಕೆ ಯಾರೂ ಬಂದಿಲ್ಲ ಎಂದು ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ.
ವೆಂಕಟರಮಣನ್ ಅವರ ಎರಡೂ ಕಣ್ಣುಗಳನ್ನು ದಾನ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.