ಬೆಂಗಳೂರು: ನಗರದ ಪ್ರಮುಖ ಮೈದಾನ, ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಆಕರ್ಷಣೆಯ ಕೇಂದ್ರವಾಗಿರುವ ಮಾಣೆಕ್ ಶಾ ಪರೇಡ್ ಮೈದಾನ ನವೀಕರಣಗೊಳ್ಳುತ್ತಿದೆ. ಮೈದಾನದ ಗ್ಯಾಲರಿ ಮೆಟ್ಟಿಲುಗಳು ಹೊಸರೂಪ ಪಡೆಯುತ್ತಿವೆ.
ಕೇಂದ್ರ ರಕ್ಷಣಾ ಇಲಾಖೆ ಅಡಿಯಲ್ಲಿರುವ ಈ ಮೈದಾನದಲ್ಲಿ ಮಿಲಿಟರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯುತ್ತಿರುತ್ತವೆ. ಜನವರಿ 26ರಂದು ಗಣರಾಜ್ಯೋತ್ಸವ ಮತ್ತು ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವವನ್ನು ರಾಜ್ಯ ಸರ್ಕಾರ ಇದೇ ಮೈದಾನದಲ್ಲಿ ಆಚರಿಸುತ್ತಾ ಬಂದಿದೆ.
ಈ ಎರಡೂ ರಾಷ್ಟ್ರೀಯ ಹಬ್ಬಗಳಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಜನಪ್ರತಿನಿಧಿಗಳು, ಪ್ರಮುಖ ಅಧಿಕಾರಿಗಳು, ಗಣ್ಯರು, ಆಹ್ವಾನಿತರು, ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಅವರು ಆಸೀನರಾಗಲು ಗ್ಯಾಲರಿಯನ್ನು ನಿರ್ಮಿಸಲಾಗಿದ್ದು, 35 ವರ್ಷಗಳಿಂದ ಗ್ಯಾಲರಿ ನವೀಕರಣಗೊಂಡಿರಲಿಲ್ಲ. ನಿರಂತರ ಮಳೆ, ಗಾಳಿ, ಬಿಸಿಲು ಎದುರಿಸಿ ದುರ್ಬಲವಾಗಿತ್ತು. ಸಿಮೆಂಟ್ ಎದ್ದುಹೋಗಿ ಕಬ್ಬಿಣ ಕಾಣುತ್ತಿತ್ತು.
ಮೈದಾನ ಮಿಲಿಟರಿ ಅಡಿಯಲ್ಲಿದ್ದರೂ ರಾಷ್ಟ್ರೀಯ ಹಬ್ಬಗಳನ್ನು ಇಲ್ಲೇ ಆಚರಿಸುತ್ತಿರುವುದರಿಂದ ಗ್ಯಾಲರಿಯ ಸಾಮರ್ಥ್ಯವನ್ನು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಪರೀಕ್ಷಿಸಬೇಕಿತ್ತು. ವರ್ಷದಿಂದ ವರ್ಷಕ್ಕೆ ದುರ್ಬಲಗೊಳ್ಳುತ್ತಿರುವುದನ್ನು ಕಂಡು ನವೀಕರಿಸಲು ಪಿಡಬ್ಲ್ಯುಡಿ ಮುಂದಾಗಿತ್ತು.
‘ಸರ್ಕಾರದ ಅನುಮತಿ ಪಡೆದ ಬಳಿಕ ₹ 75 ಲಕ್ಷ ವೆಚ್ಚದಲ್ಲಿ ನವೀಕರಿಸಲು ಯೋಜನೆ ರೂಪಿಸಲಾಗಿತ್ತು. ಫೆಬ್ರುವರಿಯಲ್ಲಿ ಕಾಮಗಾರಿ ನಡೆಸಲು ಆದೇಶವನ್ನೂ ಪಡೆಯಲಾಗಿತ್ತು. ನವೀಕರಣಕ್ಕೆ ರಕ್ಷಣಾ ಇಲಾಖೆಯಿಂದ ಮಾರ್ಚ್ 1ಕ್ಕೆ ಒಪ್ಪಿಗೆ ಸಿಕ್ಕಿದೆ’ ಎಂದು ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ವಿನೋದ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಂಭು ಕುಮಾರ್ ಅವರ ಮಾರ್ಗದರ್ಶದಲ್ಲಿ ನವೀಕರಣ ಕಾಮಗಾರಿ ಆರಂಭವಾಗಿದೆ. ಹಿಂದಿನ ಗ್ಯಾಲರಿಯನ್ನು ತೆರವುಗೊಳಿಸಲಾಗಿದೆ. ಮೊದಲ ಹಂತದಲ್ಲಿ ಕಲ್ಲು ಹಾಸಿ ಕಬ್ಬಿಣ ಅಳವಡಿಸುವ ಕಾಮಗಾರಿ ನಡೆಯುತ್ತಿದೆ’ ಎಂದು ಅವರು ವಿವರಿಸಿದರು.
ಮೂಲಸೌಕರ್ಯ ಅಭಿವೃದ್ಧಿ: ಮೈದಾನದ ಇನ್ನೊಂದು ಭಾಗದಲ್ಲಿ ಇರುವ ಸಾರ್ವಜನಿಕ ಶೌಚಾಲಯದ ಪುನರ್‌ನಿರ್ಮಾಣ ಕೂಡ ನಡೆಯುತ್ತಿದೆ. ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು 90 ದಿನಗಳನ್ನು ನಿಗದಿಪಡಿಸಲಾಗಿದೆ. ಈ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಗಿಂತ ಎರಡು ತಿಂಗಳು ಮೊದಲು ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಲೋಕೋಪಯೋಗಿ ಇಲಾಖೆ ಇಟ್ಟುಕೊಂಡಿದೆ.
ಮಾಣೆಕ್ ಶಾ ಗೌರವಾರ್ಥ ಹೆಸರು
ಬ್ರಿಟಿಷರ ಕಾಲದಲ್ಲಿ ಕಬ್ಬನ್ ಪಾರ್ಕ್ ವಿಸ್ತರಿತ ಪ್ರದೇಶವಾದ ಇಲ್ಲಿ ಮೈದಾನ ರಚನೆಯಾಗಿತ್ತು. ‘ಕ್ರೀಡಾ ಮೈದಾನ’ ಎಂದು ಆಗ ಕರೆಯಲಾಗುತ್ತಿತ್ತು. ಬಳಿಕ ‘ಗ್ಯಾರಿಸನ್ ಪರೇಡ್ ಮೈದಾನ’ ಎಂದು ಬ್ರಿಟಿಷರು ಹೆಸರು ಇಟ್ಟಿದ್ದರು. ರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳನ್ನು ಇಲ್ಲೇ ನಡೆಸಲಾಗುತ್ತಿತ್ತು. ನಗರ ಅಭಿವೃದ್ಧಿಯಾಗುತ್ತಾ ಹೋದಂತೆ ಈ ಮೈದಾನದ ವ್ಯಾಪ್ತಿಯು ಕುಗ್ಗುತ್ತಾ ಬಂದಿತ್ತು. ಆನಂತರ ಮೈದಾನಕ್ಕೆ ಆವರಣಗೋಡೆ ನಿರ್ಮಿಸಿ ಇನ್ನಷ್ಟು ಕಡಿಮೆಯಾಗುವುದನ್ನು ತಡೆಯಲಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಸೈನ್ಯಕ್ಕೆ ಸೇರಿ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಅವರು ಸ್ವಾತಂತ್ರ್ಯಾನಂತರ ನಾಲ್ಕು ಪ್ರಮುಖ ಯುದ್ಧಗಳಲ್ಲಿ ಭಾಗವಹಿಸಿದ್ದರು. 1971ರಲ್ಲಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಬಾಂಗ್ಲಾದೇಶದ ವಿಮೋಚನೆಗಾಗಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ನೇತೃತ್ವವನ್ನು ವಹಿಸಿದ್ದರು. ಈ ಮೈದಾನಕ್ಕೆ ‘ಮಾಣೆಕ್ ಶಾ ಪರೇಡ್ ಮೈದಾನ’ ಎಂದು ಹೆಸರಿಡುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ. ಆನಂತರ ದ್ವಾರದ ಮಧ್ಯ ಭಾಗದಲ್ಲಿ ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಅವರ 7 ಅಡಿ ಎತ್ತರದ ಕಬ್ಬಿಣದ ಚೌಕಟ್ಟಿನ ಪ್ರತಿಮೆ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರ ಆಚರಿಸುವ ಎರಡು ಆಚರಣೆಗಳಲ್ಲದೇ ಭಾರತೀಯ ಸೇನೆ ಮತ್ತು ಮೈದಾನದ ಐತಿಹಾಸಿಕ ಸಂದರ್ಭದ ತಿಳಿವಳಿಕೆಯನ್ನು ಹೆಚ್ಚಿಸಲು ಮಿಲಿಟರಿ ಪ್ರದರ್ಶನಗಳು ಶೈಕ್ಷಣಿಕ ಕಾರ್ಯಕ್ರಮಗಳು ಪ್ರವಾಸಿ ಕಾರ್ಯಕ್ರಮ ಸಂವಾದ–ಪ್ರದರ್ಶನಗಳನ್ನು ಇಲ್ಲಿ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.