ADVERTISEMENT

ಪಶ್ಚಿಮಘಟ್ಟ ಅಳಿದರೆ ಗುಳೆಯೇ ಗತಿ

‘ಮರಗಳಿಲ್ಲದೆ ನೀರಿಲ್ಲ’ ಅಭಿಯಾನದಲ್ಲಿ ಪರಿಸರವಾದಿಗಳು, ತಜ್ಞರು, ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 19:51 IST
Last Updated 23 ಫೆಬ್ರುವರಿ 2019, 19:51 IST
ಅಭಿಯಾನದಲ್ಲಿ ವಿದ್ಯಾರ್ಥಿಗಳು ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ
ಅಭಿಯಾನದಲ್ಲಿ ವಿದ್ಯಾರ್ಥಿಗಳು ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು:ಪಶ್ಚಿಮಘಟ್ಟಗಳನ್ನು ಉಳಿಸದಿದ್ದರೆ, ಮುಂದೊಂದು ದಿನ ನಾವೆಲ್ಲರೂ ಗುಳೆ ಹೊರಡುವ ಸ್ಥಿತಿ ಬರಲಿದೆ. ಲಿಂಗನಮಕ್ಕಿ, ತುಂಗಭದ್ರಾ ಅಣೆಕಟ್ಟುಗಳೂ ಅಪಾಯಕ್ಕೆ ಸಿಲುಕಲಿವೆ...

ಈ ಆತಂಕ ಸಾಗರದ ವಿದ್ಯಾರ್ಥಿನಿ ಮನಿಷಾ ಅವರ ಮಾತುಗಳಲ್ಲಿ ವ್ಯಕ್ತವಾಯಿತು.

ಯುನೈಟೆಡ್‌ ಕನ್ಸರ್ವೇಷನ್‌ ಅಸೋಸಿಯೇಷನ್‌ನ ಅಡಿ ವಿವಿಧ ಪರಿಸರವಾದಿ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪಶ್ಚಿಮ ಘಟ್ಟಗಳನ್ನು ಉಳಿಸುವ ಕುರಿತು ಒಕ್ಕೊರಲ ಧ್ವನಿ ಕೇಳಿ ಬಂದಿತು.

ADVERTISEMENT

ಸದ್ಯ ಉತ್ತರ ಕರ್ನಾಟಕದವರು ಗುಳೆ ಹೋಗುತ್ತಿದ್ದಾರೆ. ಮುಂದೊಂದು ದಿನ ಮಲೆನಾಡಿನವರೂ ಗುಳೆ ಹೋಗಬೇಕಾಗುವ ಸ್ಥಿತಿ ಬರಲಿದೆ ಎಂಬ ಕಳವಳ ಅವರ ಮಾತಿನಲ್ಲಿ ವ್ಯಕ್ತವಾಯಿತು.

‘90 ದಶಲಕ್ಷ ವರ್ಷಗಳ ಇತಿಹಾಸವಿರುವ ಪಶ್ಚಿಮಘಟ್ಟ, ನೂರಾರು ನದಿಗಳ ಮೂಲವೂ ಹೌದು. ಅದರ ಅಸ್ತಿತ್ವದಿಂದಲೇ ನಾವೆಲ್ಲ ಉಸಿರಾಡುತ್ತಿದ್ದೇವೆ. ಸದ್ಯ 175 ತಾಲ್ಲೂಕುಗಳ ಪೈಕಿ 156 ತಾಲ್ಲೂಕುಗಳು ಬರಪೀಡಿತವಾಗಿವೆ. ಹೀಗಿರುವಾಗ ಅದನ್ನು ರಕ್ಷಿಸದಿದ್ದರೆ ಯಾರಿಗೂ ಉಳಿವಿಲ್ಲ’ ಎಂದು ನಟ ಸುರೇಶ್‌ ಹೆಬ್ಳಿಕರ್‌ ಹೇಳಿದರು.

ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶ: ವಿದ್ಯುತ್ ನೀತಿವಿಶ್ಲೇಷಕ‌ಶಂಕರ್‌ ಶರ್ಮಾ, ‘ರಾಜ್ಯ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರಿಂದಪಶ್ಚಿಮ ಘಟ್ಟದಲ್ಲಿ 31 ಲಕ್ಷ ಮರಗಳ ಹನನವಾಗಲಿದೆ. ಕೇರಳ ಹಾಗೂ ಗೋವಾ ಮಧ್ಯೆ ವಿದ್ಯುತ್‌ ಪೂರೈಕೆಗಾಗಿ ಯೋಜನೆಯೊಂದನ್ನು ರೂಪಿಸಿ, ಜಾರಿಗೆ ತರಲು ಅನುಮತಿ ಸಹ ದೊರೆತಿದೆ. ಈ ಮೂಲಕ ಸಮೃದ್ಧ ಅರಣ್ಯವನ್ನು ನಾಶ ಮಾಡಲು ಸರ್ಕಾರ ಮುಂದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದಟ್ಟ ಅರಣ್ಯವನ್ನು ನಾಶಪಡಿಸಿ ರೂಪಿಸುತ್ತಿರುವ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಹಲವು ಅಧಿಕಾರಿಗಳೇ ವಿರೋಧ ವ್ಯಕ್ತಪಡಿಸಿದರೂ ಸರ್ಕಾರ ಮಾತ್ರ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತಿರುವುದು ಬೇಸರದ ಸಂಗತಿ. ಪ್ರಕೃತಿ ವಿರುದ್ಧದ ಯೋಜನೆಗಳನ್ನು ಕೈಬಿಟ್ಟು, ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಸಮೃದ್ಧಗೊಳಿಸಲು ಅಗತ್ಯ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

ಕೊಡಗು, ಕಾವೇರಿಯನ್ನೂ ರಕ್ಷಿಸಬೇಕು ಎಂದು ಕರ್ನಲ್‌ ಮುತ್ತಣ್ಣ ಒತ್ತಾಯಿಸಿದರು.

‘ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸುವ ಬದಲು, ನಗರದಿಂದ ಲಿಂಗನಮಕ್ಕಿಗೆ ನೀರು ಹರಿಸುವಂತಹ ಯೋಜನೆಯತ್ತ ಮುಂದಾಗುವ ಮೂಲಕ ವಿಭಿನ್ನ ಆಲೋಚನೆ ಮಾಡಬೇಕಿದೆ’ ಎಂದು ನಿವೃತ್ತ ಎಪಿಸಿಸಿಎಫ್‌ ಎ.ಎಂ.ಅಣ್ಣಯ್ಯ ಹೇಳಿದರು.

ವಿವಿಧ ಶಾಲೆಗಳ 500 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.