ರಸ್ತೆ ಸರಿಪಡಿಸಲು ಜಲ್ಲಿ ಹಾಕಲಾಯಿತು
ಕೆ.ಆರ್.ಪುರ: ಶಿವರಾತ್ರಿಯಂದು ಮಗುವಿನ ಸಾವಿಗೆ ಕಾರಣವಾಗಿದ್ದ ರಸ್ತೆ ಯನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ, ಮಂಗಳವಾರ ತಾತ್ಕಾಲಿಕವಾಗಿ ಜಲ್ಲಿಕಲ್ಲು ಮತ್ತು ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿದೆ.
ಮಾರಗೊಂಡಹಳ್ಳಿಯ ಶಿವನ ದೇವಸ್ಥಾನಕ್ಕೆ ಭಾನುವಾರ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ಪೋಷಕರೊಂದಿಗೆ ಮಗುವೂ ಇತ್ತು. ಈ ವೇಳೆ, ಕಾರೊಂದು ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಗುದ್ದಿದ ಸಮಯದಲ್ಲಿ ಕೆಳಗೆ ಬಿದ್ದ ಮಗು ಮೇಲೆ ಕಾರು ಹರಿದಿತ್ತು.
‘ಈ ಅಪಘಾತಕ್ಕೆ ಆರು ತಿಂಗಳಿಂದ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಯೇ ಕಾರಣ’ ಎಂದು ಆರೋಪಿಸಿ, ಸ್ಥಳೀಯರು ಮುಖ್ಯರಸ್ತೆಯನ್ನು ಬಂದ್ ಮಾಡಿ, ಅಧಿಕಾರಿಗಳು ಬರುವವರೆಗೂ ಇಲ್ಲಿಂದ ಕದಲುವುದಿಲ್ಲ’ ಎಂದು ಸೋಮವಾರ ಧರಣಿ ಕುಳಿತಿದ್ದರು.
‘ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕುಂಟು ನೆಪ ಹೇಳಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ’ ಎಂದು ದೂರಿದರು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ಭೇಟಿ ನೀಡಿ, ‘ಮಂಗಳವಾರದಿಂದಲೇ ರಸ್ತೆ ಅಭಿವೃದ್ಧಿ ಮಾಡುತ್ತೇವೆ. ಲೋಕೋಪಯೋಗಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಆದಷ್ಟು
ಬೇಗ ಕೆಲಸ ಮುಗಿಸುತ್ತೇವೆ’ ಎಂದು ಹೇಳಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿತ್ತು.
ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಮಣ್ಣು ಮತ್ತು ಜಲ್ಲಿ ಸುರಿದು ರಸ್ತೆ ಗುಂಡಿ ಯನ್ನು ತಾತ್ಕಾಲಿಕವಾಗಿ ಮಂಗಳವಾರ ಮುಚ್ಚಲಾಯಿತು.
ಸಮನ್ವಯ ಕೊರತೆ: ಮಹದೇವ ಪುರ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಿತ್ತಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ರಸ್ತೆಯನ್ನು ಹಿಂದೆ, ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಮಾಡಲಾಗಿತ್ತು. ಪ್ರಮುಖ ರಸ್ತೆ ಆಗಿರುವುದರಿಂದ ಮೇಲ್ದರ್ಜೆಗೇರಿಸಲು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದ ಕಾಮಗಾರಿ ನಿಧಾನಗತಿಯಲ್ಲಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ.
ಕಿತ್ತಗನೂರು ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ ಹಲವಾರು ಹಳ್ಳಿಗಳಿಗೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದೆ. ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಸಂಚಾರ ಮಾಡದ ರೀತಿಯಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದೇ ರಸ್ತೆಯ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸುತ್ತಮುತ್ತಲಿನ ಪ್ರದೇಶಗಳಾದ ಬಿದರಹಳ್ಳಿ, ಮೇಡಹಳ್ಳಿ, ಕೆ.ಆರ್.ಪುರ, ಕನಕನಗರ, ಟಿ.ಸಿ.ಪಾಳ್ಯಕ್ಕೆ ಪ್ರಮುಖ ಮಾರ್ಗವಾಗಿದೆ.
‘ಸಿ.ಎಂಗೆ ಮನವಿ: ಪ್ರಯೋಜನವಿಲ್ಲ’
‘ರಸ್ತೆ ಅವ್ಯವಸ್ಥೆ ಕುರಿತು ಮುಖ್ಯಮಂತ್ರಿಯವರಿಂದ ಹಿಡಿದು ಸ್ಥಳೀಯ ನಾಯಕರವರೆಗೂ ಮನವಿ ಪತ್ರ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ವಿ.ಪಿ.ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
‘ನಿತ್ಯ 20 ರಿಂದ 25 ವಾಹನ ಸವಾರರು ರಸ್ತೆ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ. ಶಾಲಾ ಮಕ್ಕಳು, ಮಹಿಳೆಯರು, ಹಿರಿಯರು ಸದಾ ಒಂದಿಲ್ಲೊಂದು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಗುಂಡಿಗಳಿಂದಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ಜ್ಯೋತಿ ಹೇಳಿದರು.
‘ಅಧಿಕಾರಿಗಳು ಶೀಘ್ರವಾಗಿ ರಸ್ತೆ ಪೂರ್ಣಗೊಳಿಸದೆ ಇದ್ದರೆ ಮತ್ತಷ್ಟು ಸಾವು ನೋವುಗಳಿಗೆ ಕಾರಣವಾಗಬಹುದು’ ಎಂದು ಹಳೇಹಳ್ಳಿ ನಿವಾಸಿ ನಟರಾಜ್ ಎಚ್ಚರಿಕೆ ನೀಡಿದರು.
‘ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿಯ ಜವಾಬ್ದಾರಿ ಹೊತ್ತು ಕೊಂಡಿದೆ. ಕೆಲವೊಂದು ಕೆಲಸಗಳು ಬಾಕಿ ಉಳಿದಿವೆ. ಇಲಾಖೆಯೊಂದಿಗೆ ಚರ್ಚಿಸುತ್ತೇವೆ’ ಎಂದು ಗ್ರಾಮ ಪಂಚಾಯಿತಿಯ ಪಿಡಿಒ ನರ್ಮದಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.