ADVERTISEMENT

ಬೆಂಗಳೂರು: 3 ವರ್ಷದ ಹಿಂದಿನ ಸ್ಲ್ಯಾಬ್‌ ಕಿತ್ತು ಮತ್ತೆ ಕಾಂಕ್ರೀಟ್‌

ಮಾರಪ್ಪನಪಾಳ್ಯ ವಾರ್ಡ್‌ನ ರಾಜಕಾಲುವೆ ದುರಸ್ತಿ ಕಾಮಗಾರಿ l ಸಮನ್ವಯ ಕೊರತೆಯಿಂದ ಜನರ ತೆರಿಗೆ ಹಣ ಪೋಲು

ಪ್ರವೀಣ ಕುಮಾರ್ ಪಿ.ವಿ.
Published 26 ಜನವರಿ 2022, 19:44 IST
Last Updated 26 ಜನವರಿ 2022, 19:44 IST
ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ ರಾಜಕಾಲುವೆ ಮೇಲೆ ಈ ಹಿಂದೆ ಅಳವಡಿಸಿದ್ದ ಟೈಲ್‌ಗಳನ್ನು ಕಿತ್ತು ಪಕ್ಕದಲ್ಲಿ ರಾಶಿಹಾಕಿರುವುದು (ಮೊದಲ ಚಿತ್ರ), ಹಿಂದಿನ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತು ಹೊಸತಾಗಿ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ (ಮಧ್ಯದ ಚಿತ್ರ), ರಾಜಕಾಲುವೆ ಮೇಲೆ ಮೂರು ವರ್ಷಗಳ ಹಿಂದೆ ನಿರ್ಮಿಸಿದ್ದ ಬಯಲು ವ್ಯಾಯಾಮಶಾಲೆಯ ಪರಿಕರಗಳು. ರಾಜಕಾಲುವೆ ಕಾಂಕ್ರೀಟೀಕರಣಕ್ಕೆ ಇವುಗಳನ್ನು ಕಿತ್ತು ಹಾಕಲು ಸಿದ್ಧತೆ ನಡೆದಿದೆ                 –ಪ್ರಜಾವಾಣಿ ಚಿತ್ರಗಳು
ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ ರಾಜಕಾಲುವೆ ಮೇಲೆ ಈ ಹಿಂದೆ ಅಳವಡಿಸಿದ್ದ ಟೈಲ್‌ಗಳನ್ನು ಕಿತ್ತು ಪಕ್ಕದಲ್ಲಿ ರಾಶಿಹಾಕಿರುವುದು (ಮೊದಲ ಚಿತ್ರ), ಹಿಂದಿನ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತು ಹೊಸತಾಗಿ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ (ಮಧ್ಯದ ಚಿತ್ರ), ರಾಜಕಾಲುವೆ ಮೇಲೆ ಮೂರು ವರ್ಷಗಳ ಹಿಂದೆ ನಿರ್ಮಿಸಿದ್ದ ಬಯಲು ವ್ಯಾಯಾಮಶಾಲೆಯ ಪರಿಕರಗಳು. ರಾಜಕಾಲುವೆ ಕಾಂಕ್ರೀಟೀಕರಣಕ್ಕೆ ಇವುಗಳನ್ನು ಕಿತ್ತು ಹಾಕಲು ಸಿದ್ಧತೆ ನಡೆದಿದೆ                 –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ ಸುಮಾರು 300 ಮೀ ಉದ್ದದ ರಾಜಕಾಲುವೆಗೆ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯ ಬಗ್ಗೆ ಸ್ಥಳೀಯರು ಸಂಭ್ರಮ ಪಡುವ ಬದಲು ಅಚ್ಚರಿ ವ್ಯಕ್ತಪಡಿಸುತ್ತಾರೆ!

ಮೂರು ವರ್ಷಗಳ ಹಿಂದಷ್ಟೇ ಈ ರಾಜಕಾಲುವೆಗೆ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸಿ ಅಭಿವೃದ್ಧಿಪಡಿಸಲಾಗಿತ್ತು. ಚೆನ್ನಾಗಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ ಅನ್ನು ಕಿತ್ತು ಮತ್ತೆ ಅದೇ ಜಾಗದಲ್ಲಿ ಮತ್ತೆ ಕಾಂಕ್ರೀಟ್‌ ಅಳವಡಿಸುತ್ತಿರುವುದರ ಮರ್ಮ ಏನೆಂದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

‘ಇಲ್ಲಿನ ರಾಜಕಾಲುವೆಗೆ ಮೂರು ವರ್ಷಗಳ ಹಿಂದಷ್ಟೇ ಕಾಂಕ್ರೀಟ್‌ ಸ್ಲಾಬ್‌ ನಿರ್ಮಿಸಿ ಮುಚ್ಚಲಾಗಿತ್ತು. ಅದರ ಮೇಲೆಯೇ ಟೈಲ್ಸ್‌ ಅಳವಡಿಸಿ ವ್ಯಾಯಾಮದ ಪರಿಕರಗಳನ್ನು ಹಾಗೂ ಆಸನಗಳನ್ನು ಅಳವಡಿಸಲಾಗಿತ್ತು. ಈಗ ಅವುಗಳೆಲ್ಲವನ್ನೂ ಕಿತ್ತು ಮತ್ತೆ ಹೊಸತಾಗಿ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ರಾಮಕೃಷ್ಣ ತಿಳಿಸಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಪಶ್ಚಿಮ ವಲಯದ ರಾಜಕಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ‘ರಾಜಕಾಲುವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಿಬಿಎಂಪಿಗೆ ಬಿಡುಗಡೆಯಾದ ಅನುದಾನದಲ್ಲಿ ಮಾರಪ್ಪನಪಾಳ್ಯ ವಾರ್ಡ್‌ನಲ್ಲೂ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಇಲ್ಲಿನ ರಾಜಕಾಲುವೆಯ ತಡೆಗೋಡೆಯನ್ನು ಕಲ್ಲಿನಿಂದ ಕಟ್ಟಲಾಗಿತ್ತು. ಅದು ಶಿಥಿಲಗೊಂಡಿದ್ದರಿಂದ ಸಂಪೂರ್ಣ ಕಾಂಕ್ರೀಟ್‌ನ ತಡೆಗೋಡೆ ನಿರ್ಮಿಸಿ, ಅದರ ಮೇಲೆ ಸ್ಲ್ಯಾಬ್ ನಿರ್ಮಿಸಲಾಗುತ್ತಿದೆ’ ಎಂದರು

‘ಈ ಕಾಮಗಾರಿಗೆ ಈ ವಾರ್ಡ್‌ನಲ್ಲಿ ನಿರ್ದಿಷ್ಟವಾಗಿ ಎಷ್ಟು ಅನುದಾನ ಬಳಸಲಾಗುತ್ತಿದೆ ಎಂದು ಈಗಲೇ ತಿಳಿಸಲಾಗದು. ಕಾಮಗಾರಿಯ ಬಿಲ್ಲಿಂಗ್‌ ಪೂರ್ಣಗೊಂಡ ಬಳಿಕ ಈ ಬಗ್ಗೆ ಮಾಹಿತಿ ನೀಡಬಹುದು’ ಎಂದರು.

ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ ರಾಜಕಾಲುವೆಯ ಹಿಂದಿನ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತು ಹೊಸತಾಗಿ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ

ಇಲ್ಲಿನ ರಾಜಕಾಲುವೆಗೆ ಮೂರು ವರ್ಷಗಳ ಹಿಂದಷ್ಟೇ ಕಾಂಕ್ರೀಟ್‌ ಸ್ಲ್ಯಾಬ್‌ ಹಾಕಿ ಅದರ ಮೇಲೆ ಬಯಲು ವ್ಯಾಯಾಮದ ಪರಿಕರಗಳನ್ನು ಅಳವಡಿಸಿದ್ದ ಬಗ್ಗೆ ಪ್ರಶ್ನಿಸಿದಾಗ, ‘ನಾವು ಈ ವಾರ್ಡ್‌ಗೆ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗಮನಕ್ಕೆ ತಂದೇ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದೇವೆ’ ಎಂದರು.

ಕಾಮಗಾರಿಯ ಕುರಿತು ಪ್ರತಿಕ್ರಿಯಿಸಿದ ವಾರ್ಡ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ‘ಈಗ ಕಾಂಕ್ರೀಟೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವುದು ರಾಜಕಾಲುವೆ ವಿಭಾಗದವರು. ಇಲ್ಲಿ ಕೆಲ ವರ್ಷಗಳ ಹಿಂದೆ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸಿ ವ್ಯಾಯಾಮ ಪರಿಕರಗಳನ್ನು ಅಳವಡಿಸಿದ್ದು ನಿಜ. ಹೊಸ ಕಾಮಗಾರಿ ಸಲುವಾಗಿ ವ್ಯಾಯಾಮ ಪರಿಕರಗಳನ್ನು ಹಾಗೂ ಟೈಲ್ಸ್‌ಗಳನ್ನು ಕಿತ್ತಿದ್ದೇವೆ. ಅವುಗಳನ್ನು ಅದೇ ಸ್ಥಳದಲ್ಲಿ ಮತ್ತೆ ಅಳವಡಿಸಲಾಗುವುದು’ ಎಂದರು.

‘ಮೂರು ವರ್ಷಗಳ ಹಿಂದಷ್ಟೇ ಅಳವಡಿಸಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತು ಹಾಕುವುದನ್ನು ನೋಡುವಾಗ ನಮ್ಮ ಕರುಳು ಕೂಡ ಕಿತ್ತು ಬರುತ್ತದೆ. ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ದುರ್ಬಳಕೆ ಮಾಡುವುದನ್ನು ಎಳ್ಳಷ್ಟೂ ಸಹಿಸಲಾಗದು’ ಎಂದು ಸ್ಥಳೀಯ ನಿವಾಸಿ ಶ್ರೀಕಾಂತ್‌ ಎಸ್‌.ಚನ್ನಾಳ ಬೇಸರ ವ್ಯಕ್ತಪಡಿಸಿದರು.

‘ಬಿಬಿಎಂಪಿಯ ಎರಡು ವಿಭಾಗಗಳ ನಡುವೆ ಸಮನ್ವಯದ ಕೊರತೆಗೆ ಈ ಕಾಮಗಾರಿ ಅತ್ಯುತ್ತಮ ಉದಾಹರಣೆ. ಇಲ್ಲಿನ ರಾಜಕಾಲುವೆಯ ತಡೆಗೋಡೆ ಹಾಗೂ ಸ್ಲ್ಯಾಬ್‌ ಗಟ್ಟಿಯಾಗಿಯೇ ಇತ್ತು. ಒಂದು ವೇಳೆ ತಡೆಗೋಡೆ ಗಟ್ಟಿ ಇಲ್ಲ ಎಂದಾದರೆ ಮೂರು ವರ್ಷ ಹಿಂದೆ ಅದರ ಮೇಲೆ ಸ್ಲ್ಯಾಬ್‌ ನಿರ್ಮಿಸಿದ್ದು ಏಕೆ? ಟೈಲ್ಸ್‌ ಅಳವಡಿಸಿ, ಬಯಲು ವ್ಯಾಯಾಮ ಪರಿಕರಗಳನ್ನು ಅಳವಡಿಸಿದ್ದಾದರೂ ಏಕೆ. ಸ್ಲ್ಯಾಬ್‌ ಕಿತ್ತು ಹಾಕಿದ್ದರಿಂದ ಉಂಟಾದ ನಷ್ಟಕ್ಕೆ ಯಾರು ಹೊಣೆ. ಅವುಗಳನ್ನು ಕಿತ್ತುಹಾಕಲು, ಮತ್ತೆ ಅಳವಡಿಸಲು ತಗಲುವ ವೆಚ್ಚ ಭರಿಸುವವರು ಯಾರು’ ಎಂದುಅಸೋಸಿಯೇಷನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ (ಇಂಡಿಯಾ) ಸಂಸ್ಥೆಯ (ಎಸಿಸಿಇಐ) ಬೆಂಗಳೂರು ಕೇಂದ್ರದ ಚೇರ್‌ಮನ್‌ ಕೂಡ ಆಗಿರುವ ಶ್ರೀಕಾಂತ್ ಪ್ರಶ್ನಿಸಿದರು.

ಮಾರಪ್ಪನಪಾಳ್ಯ ವಾರ್ಡ್‌ನ ರಾಜಕಾಲುವೆ ಮೇಲೆ ಮೂರು ವರ್ಷಗಳ ಹಿಂದೆ ಅಳವಡಿಸಿದ್ದ ವ್ಯಾಯಾಮ ಪರಿಕರಗಳಿವು. ರಾಜಕಾಲುವೆ ಕಾಂಕ್ರೀಟೀಕರಣಕ್ಕೆ ಇವುಗಳನ್ನು ಕಿತ್ತು ಹಾಕಲು ಸಿದ್ಧತೆ ನಡೆದಿದೆ

ಈ ಹಿಂದೆ ವ್ಯಾಯಾಮ ಪರಿಕರಗಳನ್ನು ಸ್ಥಾಪಿಸಿದ್ದ ಜಾಗದಲ್ಲಿದ್ದ ಟೈಲ್ಸ್‌ಗಳನ್ನು ಕಿತ್ತು ರಾಜಕಾಲುವೆ ಪಕ್ಕದಲ್ಲೇ ರಾಶಿ ಹಾಕಲಾಗಿದೆ. ಅವುಗಳನ್ನೂ ಯಾರು ಎತ್ತಿಕೊಂಡು ಹೋದರೂ ಕೇಳುವವರಿಲ್ಲ. ಕೆಲವು ವ್ಯಾಯಾಮ ಪರಿಕರಗಳು ಈಗಲೂ ಅಲ್ಲೇ ಇವೆ. ‘ಅವುಗಳನ್ನೂ ಕಿತ್ತು, ಆ ಜಾಗದಲ್ಲಿ ಇನ್ನಷ್ಟೇ ಕಾಮಗಾರಿ ನಡೆಸಬೇಕಿದೆ’ ಎಂದು ಸ್ಥಳೀಯರು ತಿಳಿಸಿದರು.

ಸ್ಥಳದಲ್ಲಿ ಇಲ್ಲ ಕಾಮಗಾರಿ ವಿವರ

ಯಾವುದೇ ಕಾಮಗಾರಿ ನಡೆಸುವಾಗಲೂ ಅದರ ಸಂಪೂರ್ಣ ವಿವರಗಳಿರುವ ಫಲಕವನ್ನು ಸ್ಥಳದಲ್ಲಿ ಅಳವಡಿಸಬೇಕು. ಕಾಮಗಾರಿಯ ಅಂದಾಜು ವೆಚ್ಚ, ಕೆಲಸ ಪೂರ್ಣಗೊಳಿಸಬೇಕಾದ ಅವಧಿ, ಗುತ್ತಿಗೆದಾರರ ವಿವರಗಳು ಅದರಲ್ಲಿರಬೇಕು. ಆದರೆ, ಈ ರಾಜಕಾಲುವೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಅಂತಹ ಯಾವುದೇ ಫಲಕಗಳನ್ನು ಅಳವಡಿಸಿಲ್ಲ.

ಕಿರಿದಾಗಲಿದೆ ರಾಜಕಾಲುವೆ

‘ಈಗ ಕಾಂಕ್ರೀಟ್‌ ತಡೆಗೋಡೆಯನ್ನು ರಾಜಕಾಲುವೆ ಒಳಗೇ ನಿರ್ಮಿಸಲಾಗು ತ್ತದೆ. ಇದರಿಂದ ಕಾಲುವೆಯ ಅಗಲ ಸುಮಾರು ಒಂದೂವರೆ ಅಡಿಗಳಷ್ಟು ಕಿರಿದಾಗುತ್ತದೆ. ಖಂಡಿತಾ ಇದು ಭವಿಷ್ಯದಲ್ಲಿ ಮತ್ತಷ್ಟು ಸಮಸ್ಯೆಗೆ ಕಾರಣವಾಗ ಲಿದೆ. ಅಷ್ಟಕ್ಕೂ ರಾಜಕಾಲುವೆಗಳನ್ನು ಕಾಂಕ್ರೀಟ್‌ ಸ್ಲ್ಯಾಬ್‌ನಿಂದ ಮುಚ್ಚುವುದೇ ಅಕ್ರಮ’ ಎಂದು ದೂರುತ್ತಾರೆ ಸ್ಥಳೀಯರು.

***

ಚೆನ್ನಾಗಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತು ಮತ್ತೆ ಅದೇ ಜಾಗದಲ್ಲಿ ಹೊಸತಾಗಿ ಕಾಂಕ್ರೀಟ್‌ ಸ್ಲ್ಯಾಬ್‌ ನಿರ್ಮಿಸುತ್ತಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸಾರ್ವಜನಿಕರ ತೆರಿಗೆ ಹಣದ ಪ್ರತಿ ಪೈಸೆ ಸದ್ವಿನಿಯೋಗ ಆಗಬೇಕು

- ಶ್ರೀಕಾಂತ ಎಸ್‌.ಚನ್ನಾಳ, ಎಸಿಸಿಇಐ, ಬೆಂಗಳೂರು ಕೇಂದ್ರದ ಚೇರ್‌ಮನ್‌

***

ಜನರ ತೆರಿಗೆ ಹಣವನ್ನು ಎಷ್ಟು ಸುಲಭವಾಗಿ ಲೂಟಿ ಹೊಡೆಯಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಇದನ್ನು ನೋಡುವಾಗ ದುಃಖವಾಗುತ್ತದೆ

- ಸುಬ್ರಹ್ಮಣ್ಯ ಬಿ.ಎಸ್‌., ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.